ಮೆಲ್ಬೋರ್ನ್: ಆಲ್ರೌಂಡ್ ಆಟವಾಡಿದ ಭಾರತ ತಂಡ ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ 4 ರನ್ಗಳ ರೋಚಕ ಜಯ ದಾಖಲಿಸಿ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಸೆಮಿಫೈನಲ್ ತಲುಪಿದೆ. ಇಲ್ಲಿನ ಜಂಕ್ಷನ್ ಓವಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ಗಳಲ್ಲ 8 ವಿಕೆಟ್ ಕಳೆದುಕೊಂಡು 133 ರನ್ಗಳ ಸಾಧಾರಣ ಮೊತ್ತವನ್ನಷ್ಟೇ ಗಳಿಸಿತು. ಬಳಿಕ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಅಂತ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಇನ್ನೇನು ಗುರಿ ಮುಟ್ಟುವ ಸೂಚನೆ ನೀಡಿತ್ತಾದರೂ, ಭಾರತ ತಂಡದ ಬೌಲಿಂಗ್ ವಿಭಾಗದ ಪ್ರತಿಹೋರಾಟದ ಫಲವಾಗಿ ಕಿವೀಸ್ ಪಡೆಯನ್ನು 20 ಓವರ್ಗಳಲ್ಲಿ 6 ವಿಕೆಟ್ಗೆ 129 ರನ್ಗಳಿಗೆ ಕಟ್ಟಿಹಾಕಲು ಸಾಧ್ಯವಾಯಿತು. ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ಗೆ 5 ರನ್ ಗಳಿಸುವ ಅಗತ್ಯವಿತ್ತು. ಆದರೆ ಶಿಖಾ ಪಾಂಡೆ ಬೌಲಿಂಗ್ನಲ್ಲಿ 1 ರನ್ ಗಳಿಸಲಷ್ಟೇ ಸಾಧ್ಯವಾಗಿ ನಿರಾಸೆ ಅನುಭವಿಸಿತು. ಮತ್ತೊಮ್ಮೆ 16 ವರ್ಷದ ಯುವ ಪ್ರತಿಭೆ ಶಫಾಲಿ ವರ್ಮಾ 46 ರನ್ ಸಿಡಿಸಿ ಗರಿಷ್ಠ ರನ್ ಸ್ಕೋರರ್ ಎನಿಸಿದರು. ಈ ಮೂಲಕ ಸತತ ಎರಡನೇ ಬಾರಿ ಪಂದ್ಯಶ್ರೇಷ್ಠ ಗೌರವ ತಮ್ಮದಾಗಿಸಿಕೊಂಡರು. ಐಸಿಸಿ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಂದ್ಯಶ್ರೇಷ್ಠ ಗೌರವ ಪಡೆದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ್ತಿ ಎಂಬ ದಾಖಲೆ ಶಫಾಲಿ ಹೆಸರಲ್ಲಿದೆ. ಇದರೊಂದಿಗೆ 'ಎ' ಗುಂಪಿನಲ್ಲಿ ಭಾರತ ತಂಡ ಈವರೆಗೆ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯ ಅಗ್ರಸ್ಥಾನಿಯಾಗಿ ಸೆಮಿಫೈನಲ್ಗೆ ಕಾಲಿಟ್ಟ ಮೊದಲ ತಂಡ ಎನಿಸಿಕೊಂಡಿದೆ. ಭಾರತ ತಂಡ ತನ್ನ 4ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಫೆ.29ರಂದು (ಶನಿವಾರ) ಪೈಪೋಟಿ ನಡೆಸಲಿದೆ. ಸಂಕ್ಷಿಪ್ತ ಸ್ಕೋರ್ ಭಾರತ ಮಹಿಳಾ ತಂಡ: 20 ಓವರ್ಗಳಲ್ಲಿ 8 ವಿಕೆಟ್ಗೆ 133 (ಶಫಾಲಿ ವರ್ಮಾ 46, ತಾನಿಯಾ ಭಾಟಿಯಾ 23, ರಾಧಾ ಯಾದವ್ 14; ರೋಸ್ಮೆರಿ ಮೇರ್ 27ಕ್ಕೆ 2, ಎಮಿಲಿಯಾ ಕೆರ್ 21ಕ್ಕೆ 2). ನ್ಯೂಜಿಲೆಂಡ್ ಮಹಿಳಾ ತಂಡ: ನ್ಯೂಜಿಲೆಂಡ್ 20 ಓವರ್ಗಳಲ್ಲಿ 129/6 (ಮ್ಯಾಡಿ ಗ್ರೀನ್ 24, ಕ್ಯಾಟಿ ಮಾರ್ಟಿನ್ 25, ಎಮಿಲಿಯಾ ಕೆರ್ ಔಟಾಗದೆ 34, ಹೇಲೀ ಜೆನ್ಸೆನ್ ಔಟಾಗದೆ 11; ಶಿಖಾ ಪಾಂಡೆ 21ಕ್ಕೆ 1, ರಾಜೇಶ್ವರಿ ಗಾಯಕ್ವಾಡ್ 22ಕ್ಕೆ 1, ದೀಪ್ತಿ ಶರ್ಮಾ 27ಕ್ಕೆ 1, ರಾಧಾ ಯಾದವ್ 25ಕ್ಕೆ 1, ಪೂನಮ್ ಯಾದವ್ 32ಕ್ಕೆ 1).
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2T3yvZ3