ಹೊಸದಿಲ್ಲಿ: ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜಧರ್ಮ ಪಾಲಿಸಲು ಸೂಚನೆ ನೀಡುವಂತೆ ಕೋರಿ ನಿಯೋಗ ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ನಿಯೋಗ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರಕ್ಕೆ ರಾಜಧರ್ಮ ಪಾಲಿಸುವಂತೆ ಸೂಚನೆ ನೀಡಬೇಕು ಎಂದು ವಿನಂತಿ ಮಾಡಿದೆ. ನಿಯೋಗದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಿ. ಚಿದಂಬರಂ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಭೇಟಿ ಬಳಿಕ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, “ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಪರಮಾಧಿಕಾರ ಪ್ರಯೋಗಿಸಿ ಮಧ್ಯಪ್ರವೇಶ ಮಾಡಿ ಕೇಂದ್ರ ಸರ್ಕಾರಕ್ಕೆ ರಾಜಧರ್ಮವನ್ನು ಪಾಲಿಸುವಂತೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದೇವೆ” ಎಂದರು. ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ “ ಕೇಂದ್ರ ಸರ್ಕಾರದ ವೈಪಲ್ಯದಿಂದ ಗಲಭೆ ನಡೆದಿದೆ. ಅಗತ್ಯ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗಲಭೆ ನಿಯಂತ್ರಣಕ್ಕೆ ಬಂದಿಲ್ಲ. ಈ ನಿಟ್ಟಿನಲ್ಲಿ ಗೃಹ ಸಚಿವ ಅಮಿತ್ ಶಾ ವಿಫಲರಾಗಿದ್ದಾರೆ. ದೆಹಲಿ ಗಲಭೆ ದೇಶ ನಾಚುವಂತಹದ್ದು . ಈ ಹಿನ್ನೆಲೆಯಲ್ಲಿ ಗೃಹ ಸಚಿವರ ಬದಲಾವಣೆಗೆ ರಾಷ್ಟ್ರಪತಿಯವರಲ್ಲಿ ಮನವಿ ಸಲ್ಲಿಸಿದ್ದೇವೆ” ಎಂದರು “ದೆಹಲಿ ಹಿಂಸಾಚಾರ ವಿಚಾರವಾಗಿ ನಾವು ರಾಜಕೀಯ ಮಾಡುತ್ತಿಲ್ಲ. ವಸ್ತುಸ್ಥಿತಿಯ ಅವಲೋಕನವನ್ನು ಮಾಡಿ ರಾಷ್ಟ್ರಪತಿಯವರ ಮುಂದೆ ಇಟ್ಟಿದ್ದೇವೆ. ಇದು ರಾಷ್ಟ್ರೀಯ ಪಕ್ಷವಾಗಿರುವ ನಮ್ಮ ಜಾವಾಬ್ದಾರಿಯೂ ಆಗಿದೆ” ಎಂದು ನಿಯೋಗದಲ್ಲಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
from India & World News in Kannada | VK Polls https://ift.tt/2VqWsLG