ಬೆಂಗಳೂರು: ಮುಂಬರುವ ಬಜೆಟ್‌ನಲ್ಲಿ ಮಹದಾಯಿ ಯೋಜನೆ ಜಾರಿಗೆ ಹೆಚ್ಚಿನ ಅನುದಾನ ನಿಗದಿಗೊಳಿಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದರು. ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು ''ಕೇಂದ್ರ ಸರಕಾರ ಮಹದಾಯಿ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಅಧಿಸೂಚನೆಯಿಂದ ಕಳಸಾ- ಬಂಡೂರಿ ಯೋಜನೆಯಡಿ ರಾಜ್ಯಕ್ಕೆ 13.5 ಟಿಎಂಸಿ ನೀರು ಸಿಗಲಿದೆ. ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲು ಅಗತ್ಯ ಹಣಕಾಸು ನೆರವನ್ನು ಆಯವ್ಯಯದಲ್ಲಿ ಇರಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು,'' ಎಂದರು. ''ಯೋಜನೆ ಜಾರಿಯಿಂದ ಹುಬ್ಬಳ್ಳಿ-ಧಾರವಾಡ, ಗದಗ ಸೇರಿದಂತೆ ಉತ್ತರ ಕರ್ನಾಟಕ ಭಾಗದ ನಾನಾ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಲಿದೆ. ರೈತರ ಜಮೀನಿಗೂ ನೀರಾವರಿ ಸೌಲಭ್ಯ ಸಿಗಲಿದೆ. ಆ ಭಾಗದ ರೈತರ ಬಹು ವರ್ಷಗಳ ಬೇಡಿಕೆಯನ್ನು ಕೇಂದ್ರ ಈಡೇರಿಸಿರುವುದು ನಮಗೆ ಸಂತಸ ತಂದಿದೆ,'' ಎಂದರು. ''ಮಹದಾಯಿ ಯೋಜನೆಗೆ ಸಾಕಷ್ಟು ಹೋರಾಟಗಳು ನಡೆದಿವೆ. ರಾಜ್ಯ ಸರಕಾರ ಕೂಡ ಕೇಂದ್ರಕ್ಕೆ ಹಲವು ಬಾರಿ ಮನವಿ ಮಾಡಿ ಜನರಿಗೆ ನ್ಯಾಯ ನೀಡುವಂತೆ ಒತ್ತಾಯಿಸಿತ್ತು. ಪ್ರಧಾನಿ ಹಾಗೂ ಗೃಹ ಸಚಿವರ ಬಳಿಗೆ ನಿಯೋಗ ತೆರಳಿಯೂ ಯೋಜನೆ ಜಾರಿಯ ಔಚಿತ್ಯವನ್ನು ಮನದಟ್ಟು ಮಾಡಿಕೊಡಲಾಗಿತ್ತು. ಈ ಎಲ್ಲ ಪ್ರಯತ್ನದಿಂದಾಗಿ ಕೇಂದ್ರವು ಗೆಜೆಟ್ ಅಧಿಸೂಚನೆ ಹೊರಡಿಸಿ ಜನರ ಬೇಡಿಕೆಯನ್ನು ಈಡೇರಿಸಿದೆ,'' ಎಂದು ಸಿಎಂ ಹರ್ಷ ವ್ಯಕ್ತಪಡಿಸಿದರು. ವಿಕ ಬಜೆಟ್ ಫೋಕಸ್: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾರ್ಚ್ 5ರಂದು ಮಂಡಿಸಲಿರುವ ಬಜೆಟ್ ಮೇಲೆ ರಾಜ್ಯದ ಜನರು ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಜಿಲ್ಲಾವಾರು ಅನೇಕ ಬೇಡಿಕೆಗಳು ಇವೆ. ಈ ಪೈಕಿ ಕೆಲವು ಬೇಡಿಕೆಗಳು ದಶಕಗಳಿಂದಲೂ ಇದ್ದರೂ ಇನ್ನೂ ಈಡೇರಿಲ್ಲ. ಹಾಗಾಗಿ, ಈ ಬಜೆಟ್‌ನಲ್ಲಾದರೂ ಅವುಗಳಿಗೆ ಮುಕ್ತಿ ಸಿಗಬಹುದೇ ಎಂಬ ಕಾತರವಿದೆ.ಮಹದಾಯಿ ನ್ಯಾಯಧಿಕರಣ ತೀರ್ಪಿನ ಅಧಿಸೂಚನೆ ಪ್ರಕಟಗೊಂಡ ಬೆನ್ನಲ್ಲೇ ಉತ್ತರ ಕರ್ನಾಟದ ಬಹು ಬೇಡಿಕೆಯ ಕಳಸ-ಬಂಡೂರಿ ಯೋಜನೆ ಅನುಷ್ಠಾನಕ್ಕೆ 1 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ಮೀಸಲು ಇಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
from India & World News in Kannada | VK Polls https://ift.tt/2TCC1sL