ಅಹಮದಾಬಾದ್: ನಮಸ್ತೇ..... ಇದು ಮೊಟೆರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನಮಸ್ತೇ ಟ್ರಂಪ್ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಭಾಷಣ ಮಾಡಿದ ರೀತಿ ಇದು... 8 ಸಾವಿರ ಮೈಲು ದೂರ ಸಾಗಿ ಈಗ ಭಾರತಕ್ಕೆ ಭೇಟಿ ನೀಡಿದ್ದೇವೆ. ನಾನು ಮತ್ತು ನನ್ನ ಕುಟುಂಬಕ್ಕೆ ನೀವು ನೀಡಿದ ಅಭೂತಪೂರ್ವ ಸ್ವಾಗತಕ್ಕೆ ಮನ ತುಂಬಿ ಬಂದಿದೆ. ಇದು ನಮ್ಮ ಜೀವನದಲ್ಲಿ ಸ್ಮರಣೀಯ ದಿನವಾಗಲಿದೆ ಎಂದು ಹೇಳಿದರು. ಡೊನಾಲ್ಡ್ ಟ್ರಂಪ್ ಭಾಷಣದಲ್ಲಿ ಭಾರತದ ಸಾಧಕರ ಹಾಗೂ ಕ್ರೀಡಾ ಪ್ರತಿಭೆಗಳ, ಬಾಲಿವುಡ್ ಚಿತ್ರಗಳು ಹಾಗೂ ಸ್ವಾಮಿ ವಿವೇಕಾನಂದ, ದೇಶದಲ್ಲಿ ಆಚರಿಸುವ ದೀಪಾವಳಿ, ಹೋಳಿ ಹಬ್ಬಗಳ ಬಗ್ಗೆ ಪ್ರಸ್ತಾವ ಮಾಡಿದರು. ಅಲ್ಲದೇ ಪ್ರೇಮ ಸೌಧ ತಾಜ್‌ಮಹಲ್‌ಗೆ ಭೇಟಿ ನೀಡಲು ನಾನು ಮತ್ತು ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ ಕಾತರರಾಗಿದ್ದೇವೆ ಎಂದು ತಿಳಿಸಿದರು. ನನ್ನ ಆತ್ಮೀಯ ಸ್ನೇಹಿತ ಅತ್ಯಂತ ಬಡ ಕುಟುಂಬದಿಂದ ಬಂದು ಇಂದು ಪವರ್‌ಫುಲ್ ನಾಯಕರಾಗಿ ಹೊರಹೊಮ್ಮಿದ್ದಾರೆ. ಚಹಾವಾಲಾ ಆಗಿ ಈಗ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿರುವ ನನ್ನ ಆತ್ಮೀಯ ಸ್ನೇಹಿತ ಮೋದಿ ಬಗ್ಗೆ ಭಾರತದಲ್ಲೇ ಮಾತ್ರವಲ್ಲ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಗೌರವ ಇದೆ ಎಂದರು. ಭಾರತ ಈಗ ವಿಶ್ವದ ಅತ್ಯಂತ ಕ್ಷಿಪ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿರುವ ದೇಶಗಳಲ್ಲಿ ಒಂದು. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯಂಥ ನಾಯಕ. ಬಡತನ ನಿರ್ಮೂಲನೆಗಾಗಿ ನರೇಂದ್ರ ಮೋದಿ ಸಾಕಷ್ಟು ಪರಿಶ್ರಮ ಪಡುತ್ತಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ. ಬಡತನ ರೇಖೆಗಿಂತ ಕೆಳಗಿದ್ದ ಕೋಟ್ಯಂತರ ಮಂದಿ ಈಗಾಗಲೇ ಮೇಲ್ಪಟ್ಟಕ್ಕೆ ಬಂದಿದ್ದಾರೆ. ಇದಕ್ಕೆ ಸರಕಾರದ ವಿನೂತನ ಕಾರ್ಯಕ್ರಮಗಳು ಸಾಕ್ಷಿ ಎಂದು ಡೊನಾಲ್ಡ್ ಟ್ರಂಪ್ ವಿವರಿಸಿದರು. ಭಾರತದ ಸಂಸ್ಕೃತಿ, ಸಂಪ್ರದಾಯ, ಕಲಾ ಶ್ರೀಮಂತಿಕೆ ನಮಗೆ ಇಂದು ಪರಿಚಯವಾಯಿತು. ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದಾಗ, ಅಲ್ಲಿಂದ ವಿಶ್ವದ ಬೃಹತ್ ಕ್ರಿಕೆಟ್ ಸ್ಡೇಡಿಯಂ ಆಗಿರುವ ಮೊಟೆರಾಗೆ ಬರುವಾಗ ಸಿಕ್ಕ ಲಕ್ಷಾಂತರ ಜನರ ಪ್ರೀತಿಯಿಂದ ನಮ್ಮ ಮನಸಿಗೆ ನಿಜಕ್ಕೂ ಸಂತೋಷವಾಗಿದೆ. ಇಂಥ ಅಭೂತ ಪೂರ್ವ ಸ್ವಾಗತವನ್ನು ನಾವು ಎಂದಿಗೂ ಮರೆಯುವಿದಲ್ಲ ಎಂದು ಟ್ರಂಪ್ ಹೇಳಿದರು.
from India & World News in Kannada | VK Polls https://ift.tt/2HVHepL