ಅಹಮದಾಬಾದ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಈ ಭೇಟಿ ಭಾರತ ಮತ್ತು ಅಮೆರಿಕಾ ಸಂಬಂಧಕ್ಕೆ ಹೊಸ ಅಧ್ಯಾಯ ಬರೆದಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ. "ಇತಿಹಾಸ ಪುನರಾವರ್ತನೆಯಾಗುವುದನ್ನು ನಾವು ನೋಡುತ್ತಿದ್ದೇವೆ. ಐದು ತಿಂಗಳ ಹಿಂದೆ ನಾನು ಹೌಡಿ ಮೋದಿ ಮೂಲಕ ಅಮೆರಿಕಾ ಪ್ರವಾಸ ಆರಂಭಿಸಿದೆ. ಇವತ್ತು ನನ್ನ ಗೆಳೆಯ ಅಧ್ಯಕ್ಷ ಅಹಮದಾಬಾದ್‌ನಲ್ಲಿ ಮೂಲಕ ಭಾರತ ಪ್ರವಾಸ ಆರಂಭಿಸುತ್ತಿದ್ದಾರೆ," ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮೊಟೆರಾ ಕ್ರೀಡಾಂಗಣದಲ್ಲಿ ನೆರೆದಿದ್ದ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವಕ್ಕೆ ನಿಮಗೆ ಆತ್ಮೀಯ ಸ್ವಾಗತ. ಇದು ಗುಜರಾತ್ ಆದರೆ ಇದೀ ದೇಶವೇ ನಿಮ್ಮನ್ನು ಸ್ವಾಗತಿಸಲು ಉತ್ಸಾಹಭರಿತವಾಗಿದೆ ಎಂದರು. "ಈ ಕಾರ್ಯಕ್ರಮದ ಹೆಸರು ನಮಸ್ತೆ, ಇದರ ಅರ್ಥ ತುಂಬಾ ಆಳವಾದದ್ದು. ಇದು ವಿಶ್ವದ ಅತ್ಯಂತ ಹಳೆಯ ಭಾಷೆಯ ಪದ. ಇದರರ್ಥ ನಾವು ವ್ಯಕ್ತಿಗೆ ಮಾತ್ರವಲ್ಲದೆ ಅವನೊಳಗಿನ ದೈವತ್ವಕ್ಕೂ ಗೌರವ ನೀಡುತ್ತೇವೆ," ಎಂದು ಅವರು ವಿವರಿಸಿದರು. ಭಾರತ- ಅಮೆರಿಕಾ ಸಂಬಂಧಗಳು ಕೇವಲ ಮತ್ತೊಂದು ಪಾಲುದಾರಿಕೆಯಾಗಿ ಉಳಿದಿಲ್ಲ. ಇದು ಅತ್ಯಂತ ಆತ್ಮೀಯ ಮತ್ತು ನಿಕಟ ಸಂಬಂಧವಾಗಿದೆ. ಒಂದು ದೇಶ 'ಇದು ಸ್ವತಂತ್ರರ ನಾಡು' ಎಂದರೆ, ಇನ್ನೊಂದು 'ಜಗತ್ತೇ ಒಂದು ಕುಟುಂಬ' ಎಂದು ನಂಬುತ್ತದೆ. ಒಬ್ಬರು 'ಸ್ವಾತಂತ್ರ್ಯದ ಪ್ರತಿಮೆ'ಯ ಬಗ್ಗೆ ಹೆಮ್ಮೆ ಪಡುತ್ತಾರೆ, ಇನ್ನೊಬ್ಬರು' ಏಕತೆಯ ಪ್ರತಿಮೆ 'ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ಹೇಳಿದರು. ಪ್ರಥಮ ಮಹಿಳೆ ಮೆಲಾನಿಯಾ, ಇಲ್ಲಿ ಉಪಸ್ಥಿತರಿದ್ದಾರೆ. ಅಮೆರಿಕನ್ನರ ಆರೋಗ್ಯಕ್ಕಾಗಿ ಮತ್ತು ಸಂತೋಷಕ್ಕಾಗಿ ನೀವು ಮಾಡಿದ ಕೆಲಸ ಫಲ ನೀಡುತ್ತಿದೆ. ಮಕ್ಕಳಿಗಾಗಿ ಮತ್ತು ಸಮಾಜಕ್ಕಾಗಿ ನೀವು ಮಾಡಿದ ಕೆಲಸ ಶ್ಲಾಘನೀಯ ಎಂದು ಮೋದಿ ಹೊಗಳಿದರು. ಭಾಷಣದ ನಂತರ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಒಬ್ಬರನ್ನೊಬ್ಬರು ಅಪ್ಪಿಕೊಂಡರು.
from India & World News in Kannada | VK Polls https://ift.tt/2Vgu2nq