ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ, ವಿಡಿಯೋ ಹರಿದಾಡುತ್ತಿದೆ. ಭೂಮಿಯನ್ನು ಅಗೆಯುವಾಗ ಶ್ರೀರಾಮ ಹಾಗೂ ಸೀತಾ ಮಾತೆಯ ಸಿಕ್ಕಿದೆ ಎಂದು ಆ ವಿಡಿಯೋ ಜೊತೆ ಬರೆದುಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಅಗೆಯುವಾಗ ಸಿಕ್ಕ ವಿಗ್ರಹಗಳಿವು ಎಂದು ಹೇಳಿಕೊಳ್ಳಲಾಗುತ್ತಿದೆ. ಸಾವಿರಾರು ವರ್ಷಗಳ ಹಿಂದಿನ ವಿಗ್ರಹವಿದು. ಭಗವಾನ್ ರಾಮ, ಲಕ್ಷ್ಮಣ, ಸೀತೆಯ ವಿಗ್ರಹಗಳು ಸಿಕ್ಕಿವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪಾಯ ತೋಡುವ ವೇಳೆ ಇವು ಸಿಕ್ಕಿವೆ ಎಂದು ಬರೆದುಕೊಳ್ಳಲಾಗಿದೆ. ಹಾಗೆ ನೋಡಿದ್ರೆ, ಈ ವಿಡಿಯೋಗೂ ಅಯೋಧ್ಯೆಗೂ ಸಂಬಂಧವೇ ಇಲ್ಲ. 2019ರಲ್ಲಿ ಜಾರ್ಖಂಡ್‌ನಲ್ಲಿ ಸಿಕ್ಕ ವಿಗ್ರಹಗಳಿವು. ಪತ್ತೆ ಮಾಡಿದ್ದು ಹೇಗೆ..? ಗೂಗಲ್‌ನಲ್ಲಿ ಇರುವ ರಿವರ್ಸ್ ಇಮೇಜ್ ಸರ್ಚ್ ಆಯ್ಕೆಯನ್ನು ಬಳಸಿಕೊಂಡು ಸೂಕ್ತ ಕೀ ವರ್ಡ್‌ಗಳನ್ನು ಹಾಕಿ ಈ ಫೋಟೋ ಜೊತೆಗೆ ಹುಡುಕಾಡಿದಾಗ ಜಾರ್ಖಂಡ್ ಮೂಲ ಪತ್ತೆಯಾಗಿದೆ. ಜನವರಿ 5, 2019ರಲ್ಲಿ ಜಾರ್ಖಂಡ್‌ನಲ್ಲಿ ಈ ವಿಗ್ರಹಗಳು ಪತ್ತೆಯಾಗಿದ್ದವು. ಜಾರ್ಖಂಡ್‌ನ ಕುಂತಿ ಜಿಲ್ಲೆಯ ಭಂಡಾರಾ ಪಂಚಾಯ್ತಿ ವ್ಯಾಪ್ತಿಯ ಜಿಲಿಂಗಾ ಎಂಬ ಗ್ರಾಮದಲ್ಲಿ ಈ ವಿಗ್ರಹಗಳು ಪತ್ತೆಯಾಗಿದ್ದವು. ಈ ವಿಗ್ರಹಗಳ ಅಧ್ಯಯನ ನಡೆಸಿದ ತಜ್ಞ ಡಾ. ಆನಂದ್ ವರ್ಧನ್ ಅವರ ಪ್ರಕಾರ, ಈ ವಿಗ್ರಹಗಳು 18ನೇ ಶತಮಾನಕ್ಕೆ ಸೇರಿದ್ದು ಎಂದು ತಿಳಿದುಬಂದಿದೆ. ಹಾಗೆ ನೋಡಿದ್ರೆ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಸ್ಥಳದಲ್ಲೂ ಭೂಮಿ ಸಮತಟ್ಟುಗೊಳಿಸುವ ವೇಳೆ, ಕಂಬಗಳು, ದೇಗುಲದ ಗೋಪುರ, ತಳಪಾಯ, ಮೂರ್ತಿಗಳು, ಶಿವಲಿಂಗ ಸೇರಿದಂತೆ ಹಲವು ಸಿಕ್ಕಿವೆ. ಆದ್ರೆ, ಜಾರ್ಖಂಡ್‌ನಲ್ಲಿ ಸಿಕ್ಕ ಈ ವಿಗ್ರಹಕ್ಕೂ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಬಹುದಾಗಿದೆ.
from India & World News in Kannada | VK Polls https://ift.tt/2XnK2EG