ಕಮ್ರಾನ್‌ ಅಕ್ಮಲ್‌ ವಿಕೆಟ್‌ಗಾಗಿ ದ್ರಾವಿಡ್‌ ಪರ್ಫೆಕ್ಟ್‌ ಖೆಡ್ಡಾ ತೋಡಿದ್ದ ಕಥೆ ತೆರೆದಿಟ್ಟ ರೈನಾ!

ಹೊಸದಿಲ್ಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮತ್ತು ಟೀಮ್‌ ಇಂಡಿಯಾದಲ್ಲಿ ಅಬ್ಬರಿಸಿದ್ದು ಎಂಎಸ್‌ ಧೋನಿ ನಾಯಕತ್ವದ ಅಡಿಯಲ್ಲಿ. ಅಂದಹಾಗೆ ರೈನಾ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದು ರಾಹುಲ್‌ ದ್ರಾವಿಡ್‌ ನಾಯಕತ್ವದ ಸಮಯದಲ್ಲಿ ಎಂಬುದು ಹೆಚ್ಚಿನವರಿಗೆ ಮರೆತೇ ಹೋಗಿದೆ. ರೈನಾ ಭವಿಷ್ಯದ ತಾರೆ ಆಗಬಲ್ಲ ಎಂಬುದನ್ನು ಗುರಿತಿಸಿ ಅವರಿಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡುವ ಅವಕಾಶ ಮಾಡಿಕೊಟ್ಟಿದ್ದು ರಾಹುಲ್‌ ದ್ರಾವಿಡ್‌. 2006ರಲ್ಲಿ ಟೀಮ್‌ ಇಂಡಿಯಾ ಟಿಕೆಟ್‌ ಪಡೆದುಕೊಂಡ ರೈನಾ, ಆರಂಭಿಕ ದಿನಗಳಲ್ಲಿ ತಮ್ಮ ಅದ್ಭುತ ಕ್ಷೇತ್ರರಕ್ಷಣೆಯ ಮೂಲಕ ನೋಡುಗರನ್ನು ನಿಬ್ಬೆರಗಾಗಿಸಿದ್ದರು. ಅಷ್ಟೇ ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕವೂ ಗಮನ ಸೆಳೆದಿದ್ದರು. ಇದೀಗ ದ್ರಾವಿಡ್‌ ನಾಯಕತ್ವದ ದಿನಗಳನ್ನು ನೆನೆದಿರುವ ರೈನಾ, ಇತ್ತೀಚಿನ ಸಂದರ್ಶನ ವೊಂದರಲ್ಲಿ ತಮ್ಮ ನೆನಪಿನಾಳವನ್ನು ತೆರೆದಿಟ್ಟಿದ್ದಾರೆ. ಅಂದಿನ ದಿನಗಳಲ್ಲಿ ಕರ್ನಾಟಕದ ದಿಗ್ಗಜ ಟೀಮ್‌ ಇಂಡಿಯಾ ನಾಯಕತ್ವದಲ್ಲಿ ಎಷ್ಟು ಚಾಕಚಕ್ಯತೆ ಮೆರೆದಿದ್ದರು ಎಂಬುದನ್ನು ವಿವರಿಸಿದ್ದಾರೆ. ಪ್ರಮುಖವಾಗಿ 2006ರಲ್ಲಿ ನಡೆದ ನಡುವಣ ಪಂದ್ಯದಲ್ಲಿ ನಡೆದ ಘಟನೆಯೊಂದನ್ನು ಸ್ಮರಿಸಿದ್ದಾರೆ. ಅಂದು ಆ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ವಿಕೆಟ್‌ಕೀಪರ್‌ ವಿಕೆಟ್‌ ಪಡೆಯಲು ದ್ರಾವಿಡ್‌ ವಿಶೇಷ ತಂತ್ರ ರೂಪಿಸಿ ಖೆಡ್ಡ ತೋಡಿದ್ದರು. ದ್ರಾವಿಡ್‌ ಯೋಜನೆ ಅರಿಯುವಲ್ಲಿ ವಿಫಲರಾಗಿದ್ದ ಅಕ್ಮಲ್‌ ಯಾವ ರೀತಿ ವಿಕೆಟ್‌ ಒಪ್ಪಿಸಿದರು ಎಂದು ಆ ಯೋಜನೆಯ ಒಂದು ಭಾಗವಾಗಿದ್ದ ರೈನಾ ವಿವರಿಸಿದ್ದಾರೆ. "ನಾನು ಪಾಯಿಂಟ್‌ ವಿಭಾಗದಲ್ಲಿ ನಿಂತು ತೆಗೆದುಕೊಂಡ ಆ ಕ್ಯಾಚ್‌ ಈಗಲೂ ನೆನಪಿದೆ. ರಾಹುಲ್‌ ದ್ರಾವಿಡ್‌ ನಮ್ಮ ಕ್ಯಾಪ್ಟನ್‌. ಇರ್ಫಾನ್‌ ಪಠಾಣ್‌ ಎದುರಾಳಿ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಕಮ್ರಾನ್‌ ಅಕ್ಮಲ್‌ಗೆ ಬೌಲ್‌ ಮಾಡುತ್ತಿದ್ದರು. ಆಗ 15 ಯಾರ್ಡ್‌ ಒಳಗೆ ಇಬ್ಬರು ಫೀಲ್ಡರ್‌ಗಳು ಇರಬೇಕು ಎಂಬ ನಿಯಮವಿತ್ತು. ರಾಹಲ್‌ ಭಾಯ್‌ ಪಾಯಿಂಟ್‌ನಲ್ಲಿ ಫೀಲ್ಡ್‌ ಮಾಡುತ್ತೀಯ ಎಂದು ನನ್ನನ್ನು ಕೇಳಿದ್ದರು. ಖಂಡಿತಾ ಎಲ್ಲಿ ನಿಲ್ಲಬೇಕು ಹೇಳಿ ಎಂದೆ. ಕ್ಯಾಚ್‌ ಪಡೆಯಲು ಸಿದ್ಧನಾಗಿ ನಿಲ್ಲು ಎಂದು ಪಾಯಿಂಟ್‌ನಲ್ಲಿ ನಿಲ್ಲಿಸಿದ್ದರು," ಎಂದು ಎಬಿಪಿ ನ್ಯೂಸ್‌ ಸಲುವಾಗಿ ಕಪಿಲ್‌ ದೇವ್‌ ನಡೆಸಿಕೊಟ್ಟ ಸಂದರ್ಶನದಲ್ಲಿ ರೈನಾ ಹೇಳಿಕೊಂಡಿದ್ದಾರೆ. ಅದಕ್ಕೂ ಮೊದಲು ಎರಡು ಸ್ಲಿಪ್‌ ಫೀಲ್ಡರ್‌ಗಳನ್ನು ನಿಲ್ಲಿಸಲಾಗಿತ್ತು. ಇದು ಫಲಕಾರಿ ಅಲ್ಲ ಎಂಬುದನ್ನು ಕೂಡಲೇ ಅರಿತಿದ್ದ ದ್ರಾವಿಡ್‌, ರೈನಾಗೆ ಕ್ಯಾಚಿಂಗ್‌ ಪಾಯಿಂಟ್‌ ವಿಭಾಗದಲ್ಲಿ ನಿಲ್ಲಿಸಿದ್ದರು. ನಂತರ ಇರ್ಫಾನ್‌ ಪಠಾಣ್‌ ಎಸೆದ ಎಸೆತವನ್ನು ಅಕ್ಮಲ್‌ ನೇರವಾಗಿ ರೈನಾ ಕೈ ಸೇರುವಂತೆ ಹೊಡೆದಿದ್ದರು. ಕ್ಯಾಪ್ಟನ್‌ ತೋಡಿದ್ದ ಖೆಡ್ಡಕ್ಕೆ ಅಕ್ಮಲ್‌ ಬಿದ್ದ ರೀತಿ ಕಂಡು ಕ್ಯಾಚ್‌ ಪಡೆದ ರೈನಾ ಸೀದಾ ದ್ರಾವಿಡ್‌ ಕಡೆಗೆ ನುಗ್ಗಿ ಸಂಭ್ರಮಿಸಿದ್ದರು. "ಇರ್ಫಾನ್‌ ಎಸೆದ ಚೆಂಡನ್ನು ಅಕ್ಮಲ್‌ ಬಲವಾಗಿ ಬಾರಿಸಿದ್ದರು. ಆದರೆ ಅದು ನೇರವಾಗಿ ನನ್ನತ್ತ ಬಂದು ಕ್ಯಾಚ್‌ ಪಡೆದಿದ್ದೆ. ಕ್ಯಾಚ್‌ ಅಲ್ಲಿಯೇ ಬರಬಹುದು ಎಂದು ದ್ರಾವಿಡ್‌ ಅಂದಾಜಿಸಿದ್ದ ಮರು ಎಸೆತದಲ್ಲೇ ಅದು ಸಂಭವಿಸಿತ್ತು. ಇದರಿಂದ ನಾನು ದ್ರಾವಿಡ್‌ ಅವರತ್ತ ಬಹಳ ಆಕರ್ಷಿತನಾಗಿದ್ದೆ," ಎಂದು ಭಾರತ ತಂಡದ ಅವಕಾಶ ವಂಚಿತ 33 ವರ್ಷದ ಆಲ್‌ರೌಂಡರ್‌ ರೈನಾ ಹೇಳಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YFkJin

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...