ವಿಜಯಪುರ: ಭಾನುವಾರ ಸುರಿದ ಭಾರೀ ಮಳೆಗೆ ಹಲವು ಗ್ರಾಮಗಳಲ್ಲಿ ಬೆಳೆದಿದ್ದ ಬೆಳೆಗಳು ನೀರುಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಜಿಲ್ಲೆಯ ಹಲವು ಭಾಗಗಳಲ್ಲಿ ಸುರಿದಿದ್ದು, ಹಲವು ಗ್ರಾಮಗಳಲ್ಲಿ ನೀರು ಜಮೀನಿಗೆ ನುಗ್ಗಿದೆ. ನಾಲತವಾಡ ಸಮೀಪದ ಅಡವಿ ಹುಲಗಬಾಳ ರಸ್ತೆ ಜಲಾವೃತಗೊಂಡಿದ್ದು, ಈ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗಿ ರೈತರು ಬಿತ್ತಿದ್ದ ಬೆಳೆಗಳು ಮೊಳಕೆಯೊಡೆಯುವ ಹಂತದಲ್ಲಿದ್ದಾಗಲೇ ಜಲಾವೃತಗೊಂಡಿವೆ. ಇದರಿಂದ ರೈತರು ಕೂಡ ಕಂಗಾಲಾಗಿದ್ದಾರೆ. ಇನ್ನು ಚವನಬಾವಿ, ಹುಲಗಬಾಳದಲ್ಲಿ ಜನಸಂಪರ್ಕ ಕಲ್ಪಿಸುವ ರಸ್ತೆಗಳು ಕೂಡ ಜಲಾವೃತಗೊಂಡಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನೂ ಕೆಲವೆಡೆ ಬಣವೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದರೆ, ಕೆಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ವರದಿಯಾಗಿದೆ. ಇನ್ನು ತಾಳಿಕೋಟೆ ಭಾಗದಲ್ಲೂ ಅಪಾರ ಪ್ರಮಾಣದಲ್ಲಿ ಮಳೆಯಾಗಿ ಡೋಣಿ ನದಿಯ ನೀರು ರೈತರ ಜಮೀನುಗಳಿಗೆ ನುಗ್ಗಿದೆ. ಕಳೆದ ವರ್ಷ ಉಂಟಾದ ಭಾರೀ ಪ್ರವಾಹಕ್ಕೆ ರೈತರು ಬೆಳೆದಿದ್ದ ಬೆಳೆಗಳೆಲ್ಲ ನೀರುಪಾಲಾಗಿ ಅನ್ನದಾತರು ಕೈಸುಟ್ಟುಕೊಂಡಿದ್ದರು. ಇದೀಗ ಮಳೆಗಾಲ ಆರಂಭವಾಗೋ ಹಂತದಲ್ಲೇ ಬೆಳೆಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿರೋದ್ರಿಂದ ಈ ಬಾರಿಯೂ ರೈತರು ಚಿಂತೆಗೀಡಾಗಿದ್ದಾರೆ.
from India & World News in Kannada | VK Polls https://ift.tt/3eD40BH