ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರಾದ್ ಪವಾರ್ ಅವರನ್ನು ಮಹಾರಾಷ್ಟ್ರದ ಕೊರೊನಾ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಶಾಸಕನನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲಿನ ಬಿಜೆಪಿ ಶಾಸಕ ಗೋಪಿಚಂದ್ ಪಡಾಲ್ಕರ್, ಸರ್ಕಾರವನ್ನು ಟೀಕಿಸುವ ಭರದಲ್ಲಿ ಹಿರಿಯ ರಾಜಕಾರಣಿ ಎನ್‌ಸಿಪಿ ಮುಖ್ಯಸ್ಥ ಶರಾದ್ ಪವಾರ್ ಅವರನ್ನು ಮಹಾರಾಷ್ಟ್ರದ ಕೊರೊನಾ ಎಂದು ಟೀಕಿಸಿದ್ದರು. ಬಿಜೆಪಿ ಶಾಸಕನ ಈ ಹೇಳಿಕೆ ಆಡಳಿತ ಪಕ್ಷದವರನ್ನು ಕೆರಳಿಸಿತ್ತು. ಇದೀಗ ಬಿಜೆಪಿ ಶಾಸಕ ಗೋಪಿಚಂದ್ ಪಡಾಲ್ಕರ್‌ಗೆ ತಿರುಗೇಟು ನೀಡಿರುವ ಉಪಮುಖ್ಯಮಂತ್ರಿ ಅಜಿತ್ ಪವಾರ್, ಪ್ರತಿಯೊಬ್ಬ ವ್ಯಕ್ತಿಯೂ ಆತ್ಮಗೌರವವನ್ನು ಇಟ್ಟುಕೊಂಡು ಮೌಲ್ಯಯುತವಾಗಿ ಗೌರವದಿಂದ ಮಾತನಾಡಬೇಕು. ಇದು ನಮ್ಮ ಸಂಸ್ಕೃತಿ. ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ ದಿವಂಗತ ಯಶವಂತ ಚವ್ಹಾಣ್ ಅವರು ನಮಗೆ ನೀಡಿದ ದಾರಿಯನ್ನು ನಾವು ಪಾಲಿಸಬೇಕು ಎಂದಿದ್ದಾರೆ. ಇನ್ನು ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಗೋಪಿಚಂದ್ ವಿರುದ್ಧ ಕಿಡಿಕಾರಿರುವ ಅಜಿತ್, ‘ಗೋಪಿಚಂದ್ ಅವರು ಈ ಹಿಂದೆ ಬಿಜೆಪಿಯಲ್ಲಿ ಇಲ್ಲದೇ ಇದ್ದಾಗ ನರೇಂದ್ರ ಮೋದಿ ಬಗ್ಗೆ ಯಾವ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ನೀವು ಪರಿಶೀಲಿಸಿ. ಆಗ ನಿಮಗೆ ಅವರ ಬಗ್ಗೆ ಗೊತ್ತಾಗುತ್ತದೆ ಎಂದು ಸುದ್ದಿಗಾರರೊಂದಿಗೆ ಹೇಳಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದು, ಬಿಜೆಪಿ ವಿರೋಧ ಪಕ್ಷದಲ್ಲಿದೆ. ಆಡಳಿತ ಪಕ್ಷದ ವೈಫಲ್ಯಕ್ಕಾಗಿ ಹೊಂಚು ಹಾಕಿ ಕಾಯುತ್ತಿರುವ ವಿರೋಧ ಪಕ್ಷ ಬಿಜೆಪಿ ಅವಕಾಶ ಸಿಕ್ಕಾಗಲೆಲ್ಲಾ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದೆ.
from India & World News in Kannada | VK Polls https://ift.tt/2Zc0846