ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆ ಎಚ್ಚೆತ್ತಿರುವ ದಿಲ್ಲಿ ಸರ್ಕಾರ ಇದೇ ಜುಲೈ 6ರ ಒಳಗೆ ರಾಜ್ಯದ ಎಲ್ಲಾ ಮನೆಗಳನ್ನು ಸ್ಕ್ರೀನಿಂಗ್ ಮಾಡುವುದಾಗಿ ತಿಳಿಸಿದೆ. ರಾಷ್ಟ್ರದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಇರುವ ರಾಜ್ಯಗಳಲ್ಲಿ ದಿಲ್ಲಿ ಎರಡನೇ ಸ್ಥಾನದಲ್ಲಿದ್ದು, ಕೊರೊನಾ ಪ್ರಕರಣವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಹೊಸ ಯೋಜನೆಯ ಮೂಲಕ ಕೇಜ್ರಿವಾಲ್ ಸರ್ಕಾರ ಪ್ರತೀ ಮನೆಗಳನ್ನೂ ಸ್ಕ್ರೀನಿಂಗ್ ಮಾಡುವ ನಿರ್ಧಾರಕ್ಕೆ ಬಂದಿದೆ. ನಿನ್ನೆ ಒಂದೇ ದಿನ ದಿಲ್ಲಿಯಲ್ಲಿ 3,947 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಇದು ಒಂದೇ ದಿನದಲ್ಲಿ ದಾಖಲಾದ ಅತೀಹೆಚ್ಚು ಕೊರೊನಾ ಕೇಸ್‌ಗಳು ಎಂದು ದಾಖಲೆಯಾಗಿತ್ತು. ಇಲ್ಲಿಯವರೆಗೆ ದಿಲ್ಲಿಯಲ್ಲಿ ಸರಿಸುಮಾರು 66,000 ಕೊರೊನಾ ಕೇಸ್‌ಗಳು ಕಂಡುಬಂದಿದ್ದು, ಆ ಪೈಕಿ 261 ಕಂಟೇನ್ಮೆಂಟ್ ಝೋನ್‌ಗಳಿವೆ. ಇತ್ತ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಕಳೆದ ವಾರ ಸರಣಿ ಸಭೆ ನಡೆಸಿದ್ದರು. ಬಳಿಕ ಕೊರೊನಾಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಮಾಡಿರುವ ಕೇಜ್ರಿವಾಲ್ ಸರ್ಕಾರ ಎಲ್ಲಾ ಮನೆಗಳನ್ನು ಸ್ಕ್ರೀನಿಂಗ್ ಮಾಡಲು ನಿರ್ಧರಿಸಿದೆ. ದಿಲ್ಲಿಯಲ್ಲಿ ಪ್ರತೀದಿನ 2500 ಹೊಸ ಪ್ರಕರಣಗಳು ಕಂಡು ಬರುತ್ತಿದ್ದು, ಸುಮಾರು 75 ಮಂದಿ ಕೊರೊನಾದಿಂದ ಸಾವನ್ನಪ್ಪುತ್ತಿದ್ದಾರೆ, ಅದರಲ್ಲಿ ಶೇ.45ರಷ್ಟು ಪ್ರಕರಣಗಳು ಕಂಟೇನ್ಮೆಂಟ್ ಝೋನ್‌ಗಳಲ್ಲೇ ವರದಿಯಾಗುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ ಜೂನ್ 30ರ ಒಳಗೆ ಕಂಟೇನ್ಮೆಂಟ್ ಝೋನ್‌ಗಳಲ್ಲಿರೋ ಮನೆಗಳನ್ನು ಸ್ಕ್ರೀನಿಂಗ್ ನಡೆಸಿ, ಜುಲೈ 6ರ ಒಳಗೆ ರಾಜ್ಯದ ಎಲ್ಲಾ ಮನೆಗಳನ್ನು ಸ್ಕ್ರೀನಿಂಗ್ ನಡೆಸುವುದಾಗಿ ದಿಲ್ಲಿ ಸರ್ಕಾರ ತಿಳಿಸಿದೆ.
from India & World News in Kannada | VK Polls https://ift.tt/3exvV6a