2011ರ ವಿಶ್ವಕಪ್‌ ಫೈನಲ್‌ ಪಂದ್ಯ 'ಫಿಕ್ಸ್'‌: ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಆರೋಪ!

ಹೊಸದಿಲ್ಲಿ: ಭಾರತ ಹಾಗೂ ಶ್ರೀಲಂಕಾ ನಡುವಿನ 2011ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯ ಫಿಕ್ಸ್ ಆಗಿತ್ತು ಎಂದು ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಗಂಭೀರ ಆರೋಪ ಮಾಡಿದ್ದಾರೆ. ಈ ಪಂದ್ಯದಲ್ಲಿ ನಾಯಕತ್ವದ ಭಾರತ ತಂಡ 6 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಮಣಿಸಿ ಎರಡನೇ ಬಾರಿ ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು. ಗುಂಪು ಹಂತದಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ್ದ ಶ್ರೀಲಂಕಾ ತಂಡ, ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತಕ್ಕೆ ತಲೆ ಬಾಗಿತ್ತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೀಲಂಕಾ ತಂಡ ಮಹೇಲಾ ಜಯವರ್ದನೆ(103 ರನ್‌) ಅವರ ಸ್ಫೋಟಕ ಶತಕದ ಬಲದಿಂದ ನಿಗದಿತ 50 ಓವರ್‌ಗಳಿಗೆ ಆರು ವಿಕೆಟ್‌ ಕಳೆದುಕೊಂಡು 274 ರನ್‌ ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಭಾರತ ತಂಡ, ಆರಂಭದಲ್ಲಿಯೇ ಸಚಿನ್‌ ತೆಂಡೂಲ್ಕರ್‌ ಹಾಗೂ ವಿರೇಂದ್ರ ಸೆಹ್ವಾಗ್‌ ಅವರಂತಹ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಲಸಿತ್ ಮಲಿಂಗಾ ಬೌಲಿಂಗ್‌ನಲ್ಲಿ ಈ ಇಬ್ಬರೂ ವಿಕೆಟ್‌ ಒಪ್ಪಿಸಿದ್ದರು. ಆದರೆ, ಗೌತಮ್‌ ಗಂಭೀರ್‌ ಹಾಗೂ ನಾಯಕ ಮಹೇಂದ್ರ ಸಿಂಗ್‌ ಧೋನಿಯವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಟೀಮ್‌ ಇಂಡಿಯಾ ಪಂದ್ಯ ಗೆದ್ದು ವಿಶ್ವಕಪ್‌ ಎತ್ತಿ ಹಿಡಿದಿತ್ತು. ಒತ್ತಡದಲ್ಲಿ ಅತ್ಯುದ್ಭುತ ಪ್ರದರ್ಶನ ತೋರಿದ್ದ ಗೌತಮ್‌ ಗಂಭೀರ್, 97 ರನ್‌ ಗಳಿಸಿ ಭಾರತದ ಗೆಲುವಿಗೆ ಮುನ್ನಡೆ ಬರೆದಿದ್ದರು. ನಾಯಕ ಧೋನಿಯೂ ಕೂಡ ಔಟಾಗದೆ 92 ರನ್‌ ಗಳಿಸಿ ಸಿಕ್ಸರ್‌ ಬಾರಿಸುವ ಮೂಲಕ ಭಾರತಕ್ಕೆ ಎರಡನೇ ವಿಶ್ವಕಪ್‌ ತಂದುಕೊಟ್ಟರು. ಟೀಮ್‌ ಇಂಡಿಯಾ ಒಂದೂ ಪಂದ್ಯದಲ್ಲಿ ಸೋಲು ಕಾಣದೆ ಟೂರ್ನಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿತ್ತು. ಮುಂಬೈ ವಾಂಖೇಡೆ ಕ್ರೀಡಾಂಗಣದಲ್ಲಿ 9 ವರ್ಷಗಳ ಹಿಂದೆ ನಡೆದಿದ್ದ ಐತಿಹಾಸಿಕ ಪಂದ್ಯ ಮೊದಲೇ ಫಿಕ್ಸ್‌ ಆಗಿತ್ತು ಎಂದು ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಆರೋಪ ಮಾಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಸಾಕ್ಷಿ ನೀಡುವಲ್ಲಿ ಅವರ ಕೈಯಿಂದ ಸಾಧ್ಯವಾಗದಿದ್ದರೂ, ಈ ಪ್ರಕರಣದ ಕುರಿತು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳುತ್ತಿದ್ದಾರೆ. "ಖಂಡಿತಾ ಪಂದ್ಯ ಫಿಕ್ಸ್. ನಾನು ಮಾಡಿರುವ ಆರೋಪದ ಪರ ನಾನು ನಿಲ್ಲುತ್ತೇನೆ. ನಾನು ಸಚಿವನಾಗಿದ್ದಾಗ ಈ ಘಟನೆ ನಡೆದಿದೆ, " ಎಂದು ಮಹಿಂದಾನಂದ ಅಲುಥ್‌ಗಮಗೆ ಗಂಭೀರ ಆರೋಪ ಮಾಡಿದ್ದಾರೆ. ನೀವು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲಾ ಜವಾಬ್ದಾರಿ ತೆಗೆದುಕೊಳ್ಳುತ್ತೀರಾ? ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,"ಹೌದು ನನ್ನ ಹೇಳಿಕೆಗೆ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ. ಆದರೆ, ದೇಶದ ಹಿತದೃಷ್ಟಿಯಿಂದ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲು ನಾನು ಬಯಸುವುದಿಲ್ಲ. 2011ರಲ್ಲಿ ಭಾರತದ ವಿರುದ್ಧ ನಾವು ಪಂದ್ಯವನ್ನು ಗೆಲ್ಲಬಹುದಿತ್ತು, ಆದರೆ, ಅದು ಮೊದಲೇ ಫಿಕ್ಸ್‌ ಆಗಿತ್ತು," ಎಂದು ಹೇಳಿದರು. "ನನ್ನ ಹೇಳಿಕೆಗೆ ನಾನು ಜವಾಬ್ದಾರಿಯುತವಾಗಿದ್ದು, ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಸಿದ್ದ. ಜನರಿಗೆ ಇದರ ಬಗ್ಗೆ ಕಾಳಜಿ ಇದೆ. ಇದರಲ್ಲಿ ನಾನು ಕ್ರಿಕೆಟಿಗರನ್ನು ಗುರಿಯಾಗಿಸುವುದಿಲ್ಲ. ಆದಾಗ್ಯೂ, 2011ರ ಫೈನಲ್ ಪಂದ್ಯವನ್ನು ಫಿಕ್ಸ್ ಮಾಡಲು ಕೆಲವು ಗುಂಪುಗಳು ಖಂಡಿತವಾಗಿಯೂ ಭಾಗಿಯಾಗಿದ್ದವು, ” ಎಂದು ಮಹಿಂದಾನಂದ ಅಲುಥ್‌ಗಮಗೆ ಸಿಡಿದಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/30Wn8GK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...