ಹೊಳೆನರಸೀಪುರ: ತಾಲೂಕಿನ ರಸ್ತೆ ಕಡವಿನಕೋಟೆ ತಿರುವಿನಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿರೇಬೆಳಗುಲಿ ಗ್ರಾಮದ ರಾಮಸ್ವಾಮಿ (62) ಮೃತ. ರಸ್ತೆ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಹಾಸನ ಕಡೆಯಿಂದ ಬರುತ್ತಿದ್ದ ಕಾರು ರಸ್ತೆ ತಿರುವಿನಲ್ಲಿ ಡಿಕ್ಕಿ ಹೊಡೆದಿದೆ. ನಂತರ ಕಡವಿನಕೋಟೆ ಗ್ರಾಮದ ತೋಟಕ್ಕೆ ಇಳಿದಿದೆ. ಅಡಕೆ ಮರಕ್ಕೆ ಗುದ್ದಿದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ. ಗ್ರಾಮಸ್ಥರು ಆಗಮಿಸುವಷ್ಟರಲ್ಲಿ ಕಾರು ಚಾಲಕ ಪರಾರಿಯಾಗಿದ್ದಾನೆ. ಮೃತ ರಾಮಸ್ವಾಮಿ ರೈತ ಕುಟುಂಬದವರು. ಇವರಿಗೆ ಇಬ್ಬರು ಪುತ್ರಿಯರಿದ್ದು, ಇಬ್ಬರಿಗೂ ವಿವಾಹ ಮಾಡಿದ್ದರು. ಇನ್ನು ಇಬ್ಬರು ಪುತ್ರರಿದ್ದು ಒಬ್ಬ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ರಜೆ ಹಿನ್ನೆಲೆ ಊರಿಗೆ ಬಂದಿದ್ದು, ಅಪಘಾತದ ವೇಳೆ ಮಡಿದಿದ್ದ ತಂದೆಯ ಶವ ಕಂಡು ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆಯಿತು. ಕುಟುಂಬಸ್ಥರ ಆಕ್ರಂದನ ಕಂಡು ನೆರೆದಿದ್ದ ಜನರ ಕಣ್ಣಲ್ಲಿ ನೀರು ಜಿನಿಗಿತು. ನಗರ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
from India & World News in Kannada | VK Polls https://ift.tt/3azkGu7