: ಉತ್ತರಪ್ರದೇಶ ಮೂಲದ ಕುಖ್ಯಾತ ಮನೆಗಳ್ಳ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ, 61.50 ಲಕ್ಷ ರೂ. ಮೌಲ್ಯದ 1 ಕೆ.ಜಿ 280 ಗ್ರಾಂ ಚಿನ್ನಾಭರಣ, ಒಂದು ನಾಡ ಪಿಸ್ತೂಲ್ ಮತ್ತು 5 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದೆ. ದಿಲ್ಲಿಯಲ್ಲಿ ನೆಲೆಸಿದ್ದ ಗಾಜಿಯಾಬಾದ್ ಮೂಲದ ಖುರ್ಷಿದ್(41) ಮತ್ತು ಈತನಿಂದ ಚಿನ್ನಾಭರಣ ಸ್ವೀಕರಿಸುತ್ತಿದ್ದ ದಿಲ್ಲಿಯ ವೀರೇಂದ್ರ ಕುಮಾರ್ (46) ಬಂಧಿತ ಆರೋಪಿ. ಮನೆಗಳ್ಳತನ ಮಾಡಲೆಂದು ಫೆ.7ರಂದು ನಗರಕ್ಕೆ ಬಂದಿದ್ದ ಮಾಹಿತಿ ಆಧರಿಸಿ ಖುರ್ಷಿದ್ನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಯು 2013ರಿಂದ 2020ರ ನಡುವೆ ಸಹಚರರ ಜೊತೆ ಸೇರಿ ನಗರದಲ್ಲಿಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ. ಈತನ ಬಂಧನದಿಂದ ಒಟ್ಟು 15 ಪ್ರಕರಣಗಳು ಪತ್ತೆಯಾಗಿವೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು. ಆರೋಪಿಯಿಂದ ಚಿನ್ನ ವಶಪಡಿಸಿಕೊಳ್ಳಲು ಸಿಸಿಬಿ ಇನ್ಸ್ಪೆಕ್ಟರ್ ಹಜರೇಶ್ ಕಿಲ್ಲೇದಾರ್ ಮತ್ತು ತಂಡ ದಿಲ್ಲಿ, ಹರಿಯಾಣ ಮತ್ತು ಉತ್ತರಪ್ರದೇಶಕ್ಕೆ ತೆರಳಿ ಹತ್ತು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಆಭರಣ ಮತ್ತು ಪಿಸ್ತೂಲ್, ಗುಂಡುಗಳನ್ನು ವಶಪಡಿಸಿಕೊಂಡಿದೆ. ಖುರ್ಷಿದ್ನಿಂದ ಆಭರಣ ಪಡೆಯುತ್ತಿದ್ದ ವಿರೇಂದ್ರಕುಮಾರ್ನನ್ನು ದಿಲ್ಲಿಯಲ್ಲಿ ಬಂಧಿಸಲಾಗಿದೆ. ಯಾರೂ ಇಲ್ಲದ ಮನೆಗಳನ್ನು ಗುರುತಿಸುತ್ತಿದ್ದ ಆರೋಪಿಗಳು, ಬಾಗಿಲು ಮುರಿದು ಒಳಪ್ರವೇಶಿಸಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು. ಆರೋಪಿಗಳ ಬಂಧನದಿಂದ ಜೆ.ಬಿ ನಗರ, ಕೆಂಗೇರಿ, ಜ್ಞಾನಭಾರತಿ, ಕೆ.ಜಿ ನಗರ, ಹನುಮಂತನಗರ, ವಿಜಯನಗರ, ಮೈಕೋ ಲೇಔಟ್, ಸುಬ್ರಮಣ್ಯನಗರ, ಬ್ಯಾಡರಹಳ್ಳಿ ಮತ್ತು ನಂದಿನಿಲೇಔಟ್ ಠಾಣೆಯಲ್ಲಿ ವರದಿಯಾಗಿದ್ದ ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.
from India & World News in Kannada | VK Polls https://ift.tt/2O3x7pe