ನಾಗರಾಜು ಅಶ್ವತ್ಥ್ ಬೆಂಗಳೂರು ಗ್ರಾ. ಬೆಂಗಳೂರು: 2012 ಏ.1ರಿಂದ ರಾಜ್ಯಾದ್ಯಂತ ಜಾರಿಯಾದ ಆರ್‌ಟಿಇ ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ 1ನೇ ತರಗತಿಗೆ ದಾಖಲಾತಿ ಪಡೆದಿದ್ದ 49 ಸಾವಿರ ವಿದ್ಯಾರ್ಥಿಗಳು 8ನೇ ತರಗತಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಸರಕಾರ ಕೇವಲ 8ನೇ ತರಗತಿವರೆಗೆ ಮಾತ್ರ ಶುಲ್ಕ ಭರಿಸುತ್ತಿದ್ದು, ಮುಂದೆ ಅವರೇ ತಮ್ಮ ಶುಲ್ಕ ಕಟ್ಟಬೇಕಾಗಿದೆ. ಹೀಗಾಗಿ ಹಲವಾರು ಮಂದಿ ಹೆಚ್ಚಿನ ಶುಲ್ಕ ಪಾವತಿಸಿ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಲಾಗದೆ ಸದ್ಯ ಅತಂತ್ರ ಸ್ಥಿತಿಯಲ್ಲಿದ್ದಾರೆ. ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಶಾಲೆಗಳಿಂದ ಹೊರಗುಳಿಯುವ ಸ್ಥಿತಿಗೆ ಬಂದಿದ್ದು, ಇದರಿಂದ ಪೋಷಕರು ಕಂಗಾಲಾಗಿದ್ದಾರೆ. ಈ ನಡುವೆ, ಆರ್‌ಟಿಇ ಶಿಕ್ಷಣವನ್ನು ದ್ವಿತೀಯ ಪಿಯುಸಿವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಏನು ಸಮಸ್ಯೆ? 4ರಿಂದ 16 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಬೇಕೆಂಬ ಸದುದ್ದೇಶದಿಂದ ಶಿಕ್ಷಣ ಹಕ್ಕು ಕಾಯಿದೆ(ಆರ್‌ಟಿಇ)ಯನ್ನು 2009ರಲ್ಲಿ ದೇಶಾದ್ಯಂತ ಜಾರಿಗೊಳಿಸಲಾಯಿತು. ಆದರೆ, ರಾಜ್ಯದಲ್ಲಿ ಈ ಕಾಯಿದೆ 2012 ಏ.1ರಂದು ಜಾರಿಯಾಯಿತು. ಕಾಯಿದೆ ಅನ್ವಯ, ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ಉಚಿತ ಸೀಟುಗಳನ್ನು ಕಾಯ್ದಿರಿಸುವ ವ್ಯವಸ್ಥೆ ಜಾರಿಗೊಳಿಸಲಾಯಿತು. ಶಾಲೆಗಳಿಂದ ಹೊರಗುಳಿದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಒದಗಿಸುವುದು ಒಂದು ಗುರಿಯಾದರೆ, ಸುಸಜ್ಜಿತ ಖಾಸಗಿ ಶಾಲೆಗಳಲ್ಲೂ ಆರ್‌ಟಿಇ ಕಾಯಿದೆ ಅಡಿ, ಬಡ ಮಕ್ಕಳ ದಾಖಲಾತಿಗೆ ಅವಕಾಶ ಕಲ್ಪಿಸಬೇಕೆನ್ನುವ ನಿಯಮ ಜಾರಿಗೊಳಿಸಲಾಯಿತು. ಆರ್‌ಟಿಇ ಕಾಯಿದೆ ಅಡಿ, ಖಾಸಗಿ ಶಾಲೆಗಳಿಗೆ ದಾಖಲಾತಿ ಪಡೆಯುವ ಶೇ.25ರಷ್ಟು ವಿದ್ಯಾರ್ಥಿಗಳ ವಾರ್ಷಿಕ ಶುಲ್ಕ ನಾನಾ ಮಾನದಂಡಗಳನ್ವಯ 16,500 ರೂ. ಪಾವತಿಯಾಗುತ್ತಿತ್ತು. 2012ರಿಂದ ಆರಂಭವಾದ ಈ ದಾಖಲಾತಿಯಲ್ಲಿ ರಾಜ್ಯಾದ್ಯಂತ 49,259 ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಕಲಿಕೆ ಮಾಡುತ್ತಿದ್ದಾರೆ. 2020-21ರಲ್ಲಿ ಈ ವಿದ್ಯಾರ್ಥಿಗಳು 8ನೇ ತರಗತಿ ಪೂರ್ಣಗೊಳಿಸಿದ್ದು, ಇವರ ಮುಂದಿನ ಶಿಕ್ಷಣದ ಹೊಣೆ ಯಾರದೆಂಬುದರ ಸ್ಪಷ್ಟ ಚಿತ್ರಣವೇ ಇಲ್ಲದಂತಾಗಿದೆ. ಬದಲಾದ ಆರ್‌ಟಿಇ ನಿಯಮ, ಹಲವರಿಗೆ ಅವಕಾಶ ವಂಚನೆ ಖಾಸಗಿ ಶಾಲೆಗಳಲ್ಲೂ ಶಿಕ್ಷಣ ಕೊಡಿಸಬಹುದೆನ್ನುವ ಆಸೆಯಲ್ಲಿದ್ದ ಬಡ ಪೋಷಕರಿಗೆ 2018ರಲ್ಲಿ ಸರಕಾರ ಶಾಕ್ ನೀಡಿತು. ಮಗುವಿನ ವಾಸ ಸ್ಥಳದಿಂದ 1 ಕಿಮೀ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಯಿದ್ದರೆ ಖಾಸಗಿ ಶಾಲೆಗಳಿಗೆ ಆರ್‌ಟಿಇ ದಾಖಲಾತಿ ಇಲ್ಲ ಎಂದು ಸ್ಪಷ್ಟಪಡಿಸಿತು. ಈ ನಿಯಮದಿಂದ 1 ಲಕ್ಷ ದಾಟುತ್ತಿದ್ದ ಆರ್‌ಟಿಇ ದಾಖಲಾತಿ 20 ಸಾವಿರಕ್ಕೆ ಇಳಿಯಿತು. 2018ಕ್ಕೂ ಮುನ್ನ ಆರ್‌ಟಿಇ ಅಡಿ ದಾಖಲಾತಿಗೆ 2.74 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. 2019-20ರಲ್ಲಿ ಈ ಸಂಖ್ಯೆ ಕೇವಲ 17,310ಕ್ಕೆ ಸೀಮಿತವಾಗಿದೆ. ಪ್ರಸಕ್ತ ವರ್ಷವಂತೂ ಕಾಯಿದೆಯ ಅನ್ವಯ ದಾಖಲಾಗುವ ಮಕ್ಕಳ ಸಂಖ್ಯೆ 3000 ದಾಟಿಲ್ಲ. 8ರ ನಂತರ ಗೇಟ್‌ಪಾಸ್...
- 8ನೇ ತರಗತಿವರೆಗೆ ಖಾಸಗಿ ಶಾಲೆಯಲ್ಲಿ ಕಲಿತ ಮಕ್ಕಳಿಗೆ ಪೂರ್ಣ ಶುಲ್ಕದ ಒತ್ತಡ
- ಶುಲ್ಕ ಪಾವತಿಸದ ಮಕ್ಕಳಿಗೆ ಶಾಲೆಯಿಂದ ಗೇಟ್‌ಪಾಸ್
- ಸರಕಾರಿ ಶಾಲೆಗಳಲ್ಲಿ ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮವಿಲ್ಲದೆ ಸಮಸ್ಯೆ
- ಶುಲ್ಕ ಕಟ್ಟಲಾಗದೆ, ಬೇರೆಡೆ ಸೇರಲಾಗದೆ ಮಕ್ಕಳು ಅತಂತ್ರ
from India & World News in Kannada | VK Polls https://ift.tt/3ky9H7H