
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಹಿರೇನಾಗವೇಲಿಯಲ್ಲಿ ಮಂಗಳವಾರ ಮಧ್ಯರಾತ್ರಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು 6 ಮಂದಿ ದಾರುಣವಾಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಇಬ್ಬರು ಮಾಲೀಖರು ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಮಾಲೀಕ ಹಾಗೂ ಪ್ರಮುಖ ಆರೋಪಿ ನಾಗರಾಜ್ ತಲೆ ಮರೆಸಿಕೊಂಡಿದ್ದಾನೆ. ಆರೋಪಿಗಳಾದ ರಾಘವೇಂದ್ರ ರೆಡ್ಡಿ, ಪ್ರವೀಣ್, ರಿಯಾಜ್, ಮಧುಸೂದನ್ ರೆಡ್ಡಿ ಬಂಧಿತ . ಆರೋಪಿಗಳನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದ್ದು ಕರ್ನಾಟಕಕ್ಕೆ ಪೊಲೀಸರು ಕರೆತರುತ್ತಿದ್ದಾರೆ.ಇನ್ನು ಕ್ವಾರೆಯ ಪ್ರಮುಖ ಮಾಲೀಕ ಹಾಗೂ ಪ್ರಮುಖ ಆರೋಪಿ ನಾಗರಾಜ್‌ಗಾಗಿ ತೀವ್ರ ಶೋಧ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಹುಣಸೋಡು ದುರಂತ ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ತಾಲೂಕಿನ ಹಿರೇನಾಗವೇಲಿಯಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು 6 ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಈ ಪೈಕಿ ವಾಹನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಜಿಲೆಟಿನ್ ಸ್ಫೋಟದ ರಭಸಕ್ಕೆ ಮೃತ ದೇಹಗಳು ಛಿದ್ರ ಛಿದ್ರವಾಗಿತ್ತು. ಆಂಧ್ರದ ಮೂವರು, ನೇಪಾಳ, ಬಾಗೇಪಲ್ಲಿ, ಚೇಳೂರಿನ ತಲಾ ಒಬ್ಬರು ಈ ಸ್ಫೋಟದಲ್ಲಿ ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸಂಸದ ಬಚ್ಚೇಗೌಡ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇನ್ನು ಹಿರೆನಾಗವೇಲಿಯಲ್ಲಿ 3 ಎಕರೆಯಲ್ಲಿ ಕಲ್ಲುಕ್ವಾರಿ ಇದೆ. ಜೊತೆಗೆ 3 ಎಕರೆಯಲ್ಲಿ ಕ್ರಷರ್ ಇದೆ. ಈ ಕ್ವಾರಿಯ ಹೆಸರು ಶ್ರೀ ಶಿರಡಿ ಸಾಯಿ ಎಜೆನ್ಸೀಜ್. ಇದಕ್ಕೆ 3 ಜನ ಪಾಲುದಾರರು. ಒಬ್ಬರು ಕರ್ನಾಟಕದ ನಾಗರಾಜ ಮತ್ತು ಇಬ್ಬರು ಆಂಧ್ರ ಮೂಲದ ರೆಡ್ಡಿಗಳಾಗಿದ್ದಾರೆ.
from India & World News in Kannada | VK Polls https://ift.tt/3pRzF78