ಸಾರಕ್ಕಿ ಸಿಗ್ನಲ್‌ನಲ್ಲಿ 1.2 ಕಿ.ಮೀ ಉದ್ದದ ಮೇಲ್ಸೇತುವೆ; ಟ್ರಾಫಿಕ್ ಜಾಮ್ ಕಿರಿಕಿರಿಗೆ ಬಿಬಿಎಂಪಿ ಬ್ರೇಕ್!

ನಾಗಪ್ಪ ನಾಗನಾಯಕನಹಳ್ಳಿ ಬೆಂಗಳೂರು ಬೆಂಗಳೂರು: ವಾಹನ ಸಂಚಾರದ ಪ್ರವಾಹವಿರುವ ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್‌ನಲ್ಲಿ ಟ್ರಾಫಿಕ್‌ಜಾಮ್‌ ಕಿರಿಕಿರಿಯಿಂದ ಸವಾರರನ್ನು ಪಾರು ಮಾಡಲು ಬಿಬಿಎಂಪಿಯು 1.2 ಕಿ.ಮೀ ಉದ್ದದ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಈ ಮೇಲ್ಸೇತುವೆ ನಿರ್ಮಾಣದಿಂದ ವಾಹನ ಸವಾರರಿಗೆ ದಟ್ಟಣೆಯಿಂದ ಮುಕ್ತಿ ಸಿಗಲಿದೆ. ಬಿಬಿಎಂಪಿಯು ಮೇಲ್ಸೇತುವೆ ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ, ಅನುಮೋದನೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮೇಲ್ಸೇತುವೆ ನಿರ್ಮಾಣಕ್ಕಾಗಿ 130 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ರಾಜ್ಯ ಸರಕಾರವು 2021-22ನೇ ಸಾಲಿನ ಬಜೆಟ್‌ನಲ್ಲಿ ಸಾರಕ್ಕಿ ಸಿಗ್ನಲ್‌ನಲ್ಲಿ ಮೇಲ್ಸೇತುವೆಗೆ ಅನುದಾನ ಒದಗಿಸುವ ಸಾಧ್ಯತೆಗಳಿವೆ. ಈಗಾಗಲೇ ನಗರೋತ್ಥಾನ ಯೋಜನೆಯಡಿಯಲ್ಲಿ ಮೈಸೂರು ರಸ್ತೆಯಿಂದ ಸಿಲ್ಕ್ ಬೋರ್ಡ್‌ ಜಂಕ್ಷನ್‌ವರೆಗಿನ ಹೊರವರ್ತುಲ ರಸ್ತೆಯನ್ನು 153.42 ಕೋಟಿ ರೂ. ವೆಚ್ಚದಲ್ಲಿ ಸಿಗ್ನಲ್‌ ಮುಕ್ತ ಕಾರಿಡಾರ್‌ ಆಗಿ ಪರಿವರ್ತಿಸಲಾಗಿದೆ. ಕೆಇಬಿ ಜಂಕ್ಷನ್‌, ದೇವೇಗೌಡ ಪೆಟ್ರೋಲ್‌ ಬಂಕ್‌ (ಕಿತ್ತೂರು ರಾಣಿ ಚೆನ್ನಮ್ಮ ಮೇಲ್ಸೇತುವೆ), ದಾಲ್ಮಿಯಾ ಜಂಕ್ಷನ್‌ನಲ್ಲಿ ಮೇಲ್ಸೇತುವೆ ಹಾಗೂ ಮುತ್ತುರಾಜ ಜಂಕ್ಷನ್‌, ಕದಿರೇನಹಳ್ಳಿ ಮತ್ತು ಪುಟ್ಟೇನಹಳ್ಳಿ (ವಿಶ್ವನಾಥ್‌ ಕೆಳಸೇತುವೆ) ಬಳಿ ಅಂಡರ್‌ಪಾಸ್‌ ನಿರ್ಮಿಸಿ, ಸಿಗ್ನಲ್‌ ಮುಕ್ತಗೊಳಿಸಲಾಗಿದೆ. ಪರಿಣಾಮ, ತುಮಕೂರು ರಸ್ತೆ, ಮೈಸೂರು ರಸ್ತೆ ಹಾಗೂ ಬನ್ನೇರುಘಟ್ಟ ರಸ್ತೆ ಕಡೆಯಿಂದ ಸರಾಗವಾಗಿ ಸಾಗಿ ಬರುವ ವಾಹನಗಳು ಸಾರಕ್ಕಿ ಸಿಗ್ನಲ್‌ನ ದಟ್ಟಣೆಯ ವ್ಯೂಹದಲ್ಲಿ ಸಿಲುಕಿ ಹಾಕಿಕೊಳ್ಳುತ್ತಿವೆ. ಸಾರಕ್ಕಿ ಸಿಗ್ನಲ್‌ನಲ್ಲಿ ನಾಲ್ಕು ರಸ್ತೆಗಳು ಬಂದು ಕೂಡುತ್ತವೆ. ಹೀಗಾಗಿ, ಇಲ್ಲಿ ನಿತ್ಯವೂ ಟ್ರಾಫಿಕ್‌ಜಾಮ್‌ ಉಂಟಾಗುತ್ತಿದ್ದು, ಕಿ.ಮೀ.ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಬೆಳಗ್ಗೆ ಮತ್ತು ಸಂಜೆ ವೇಳೆ ಕನಕಪುರ ರಸ್ತೆಯಲ್ಲಿ ಒಂದು ಕಡೆ ಯಲಚೇನಹಳ್ಳಿವರೆಗೆ, ಮತ್ತೊಂದು ಕಡೆ ಸಾರಕ್ಕಿ ಮಾರುಕಟ್ಟೆವರೆಗೆ ದಟ್ಟಣೆ ಉಂಟಾಗುತ್ತದೆ. ಹಾಗೆಯೇ, ಹೊರವರ್ತುಲ ರಸ್ತೆಯಲ್ಲಿ ಇಲಿಯಾಸ್‌ ನಗರದವರೆಗೆ ಮತ್ತು ಜೆ.ಪಿ.ನಗರ 6ನೇ ಹಂತದ 35ನೇ ಮುಖ್ಯರಸ್ತೆವರೆಗೆ ಟ್ರಾಫಿಕ್‌ಜಾಮ್‌ ಆಗುತ್ತಿದ್ದು, ಇದರಿಂದ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳಿಗೆ ಎರಡು ಕಡೆಯಷ್ಟೇ ಸಿಗ್ನಲ್‌ ಇದೆ. ಹೊಸಕೆರೆಹಳ್ಳಿಯ ವೀರಭದ್ರನಗರ ಜಂಕ್ಷನ್‌, ಕಾಮಾಕ್ಯ ಬಳಿ ಸಾಲಾಗಿ ನಿಂತು ಕಾಯಬೇಕಿದೆ. ಆ ಎರಡು ಕಡೆ ಬಿಟ್ಟರೆ ಬೇರೆಲ್ಲೂ ಸಿಗ್ನಲ್‌ಗಳಿಲ್ಲ. ಹಾಗೆಯೇ, ಬನ್ನೇರುಘಟ್ಟ ರಸ್ತೆ ಕಡೆಯಿಂದ ಬರುವ ವಾಹನಗಳಿಗೆ ಟ್ರಾಫಿಕ್‌ ಸಿಗ್ನಲ್‌ನ ಕಿರಿಕಿರಿಯೇ ಇಲ್ಲ. ಹೀಗಾಗಿ, ಎರಡೂ ಕಡೆಯಿಂದ ವಿರುದ್ಧ ದಿಕ್ಕಿನಲ್ಲಿ ಸರಾಗವಾಗಿ ಸಾಗಿ ಬರುವ ವಾಹನಗಳು ಸಾರಕ್ಕಿ ಸಿಗ್ನಲ್‌ನ 'ಬಾಟಲ್‌ ನೆಕ್‌'ನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ. ಮೆಟ್ರೊ ಸಂಚಾರದ ಬಳಿಕ, ಅಭಿವೃದ್ಧಿಯ ಚಹರೆ ಬದಲು 'ನಮ್ಮ ಮೆಟ್ರೊ' ರೈಲು ಸಂಚಾರ ಶುರುವಾದ ಬಳಿಕ ಕನಕಪುರ ರಸ್ತೆಯ ಆಜುಬಾಜಿನಲ್ಲಿರುವ ಪ್ರದೇಶಗಳ ಚಹರೆಯೇ ಬದಲಾಗಿ ಹೋಗಿದೆ. ಹಲವು ಅಪಾರ್ಟ್‌ಮೆಂಟ್‌ಗಳು, ಶಾಪಿಂಗ್‌ ಮಾಲ್‌ಗಳು ತಲೆ ಎತ್ತಿವೆ. 2500 ಫ್ಲ್ಯಾಟ್‌ಗಳಿರುವ ಮೂರ್ನಾಲ್ಕು ವಸತಿ ಸಮುಚ್ಚಯಗಳು, ಎರಡು ಬೃಹತ್‌ ಮಾಲ್‌ಗಳು ನಿರ್ಮಾಣವಾಗುತ್ತಿವೆ. ಇದರಿಂದ ಮತ್ತಷ್ಟು ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿಯೇ, ಸಾರಕ್ಕಿ ಸಿಗ್ನಲ್‌ನಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂದು ಈ ಭಾಗದ ಜನರು, ಸಂಘಟನೆಗಳು, ಜನಪ್ರತಿನಿಧಿಗಳು ಮೇಲೆ ಒತ್ತಡ ಹೇರುತ್ತಿದ್ದರು. ಇದಕ್ಕೆ ಮಣಿದ ಪಾಲಿಕೆಯು ಮೇಲ್ಸೇತುವೆ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧಪಡಿಸಿ, ಸರಕಾರದ ಅನುಮೋದನೆಗೆ ಸಲ್ಲಿಸಿದೆ. ನೆಲಮಟ್ಟದಿಂದ 5.5 ಮೀಟರ್‌ ಎತ್ತರದಲ್ಲಿ ನಿರ್ಮಾಣ ಜೆ.ಪಿ.ನಗರ 6ನೇ ಹಂತದ 35ನೇ ಅಡ್ಡರಸ್ತೆಯಿಂದ ಇಲಿಯಾಸ್‌ನಗರ ಜಂಕ್ಷನ್‌ವರೆಗೆ 1.2 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣವಾಗಲಿದೆ. 4 ಪಥದ ಮೇಲ್ಸೇತುವೆಯು 17 ಮೀಟರ್‌ನಷ್ಟು ಅಗಲವಿರಲಿದೆ. ಕನಕಪುರ ಮುಖ್ಯರಸ್ತೆಯಲ್ಲಿ ಸಾರಕ್ಕಿ ಸಿಗ್ನಲ್‌ ಮೂಲಕ ಹಾದು ಹೋಗಿರುವ ಮೆಟ್ರೊ ಮಾರ್ಗವು 13.5 ಮೀಟರ್‌ ಎತ್ತರದಲ್ಲಿದೆ. ಅದರಡಿಯಲ್ಲಿ ನೆಲ ಮಟ್ಟದಿಂದ 5.5 ಮೀಟರ್‌ ಎತ್ತರದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಇದರಿಂದ ಎರಡೂ ದಿಕ್ಕಿನಿಂದ ಬರುವ ವಾಹನಗಳು ಟ್ರಾಫಿಕ್‌ ಸಿಗ್ನಲ್‌ನ ಕಿರಿಕಿರಿಯಿಲ್ಲದೇ ಸರಾಗವಾಗಿ ಸಂಚರಿಸಲಿವೆ. ಕನಕಪುರ ರಸ್ತೆ ಮತ್ತು ಹೊರವರ್ತುಲ ರಸ್ತೆ ಮಾರ್ಗವಾಗಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೊರವರ್ತುಲ ರಸ್ತೆಯ ಎರಡೂ ದಿಕ್ಕಿನಲ್ಲಿ ಬಹುತೇಕ ಜಂಕ್ಷನ್‌ಗಳು ಸಿಗ್ನಲ್‌ ಮುಕ್ತಗೊಳಿಸಲಾಗಿದೆ. ಪರಿಣಾಮ, ವೇಗವಾಗಿ ಬರುವ ವಾಹನಗಳು ಸಾರಕ್ಕಿ ಸಿಗ್ನಲ್‌ನ ಬಾಟಲ್‌ ನೆಕ್‌ನಲ್ಲಿ ಸಿಲುಕಿ ಹಾಕಿಕೊಳ್ಳುತ್ತವೆ. ಸಾರಕ್ಕಿ ಸಿಗ್ನಲ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆವು. ಮೇಲ್ಸೇತುವೆ ನಿರ್ಮಾಣ ಸಂಬಂಧ ಡಿಪಿಆರ್‌ ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಸಿರುವುದು ಹಲವು ವರ್ಷಗಳ ಹೋರಾಟಕ್ಕೆ ಸಂದ ಜಯವಾಗಿದೆ. ಅಬ್ದುಲ್‌ ಅಲೀಂ, ಅಧ್ಯಕ್ಷ, ಚೇಂಜ್‌ ಮೇಕರ್ಸ್ ಆಫ್‌ ಕನಕಪುರ ರಸ್ತೆ ಸಂಘಟನೆ ಸಂಚಾರಕ್ಕೆ ಮುಕ್ತವಾಗಿರುವ ಮೇಲ್ಸೇತುವೆಗಳು
  • 2017ರ ಫೆ. 2- ಕಿತ್ತೂರು ರಾಣಿ ಚೆನ್ನಮ್ಮ ಮೇಲ್ಸೇತುವೆ - ವೆಚ್ಚ 35.80 ಕೋಟಿ ರೂ.
  • 2018ರ ಮಾ. 2- ದಾಲ್ಮಿಯಾ ಜಂಕ್ಷನ್‌ ಮೇಲ್ಸೇತುವೆ - ವೆಚ್ಚ 25.89 ಕೋಟಿ ರೂ.
  • 2017ರ ಸೆ. 16- ಕೆಇಬಿ ಜಂಕ್ಷನ್‌ ಮೇಲ್ಸೇತುವೆ - ವೆಚ್ಚ 17.82 ಕೋಟಿ ರೂ.


from India & World News in Kannada | VK Polls https://ift.tt/3aMpPza

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...