
ಬೆಂಗಳೂರು: ಕೇರಳ ಹಾಗೂ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ಪ್ರಯಾಣವನ್ನು ನಿಷೇಧಿಸಿಲ್ಲ ಎಂದು ಆರೋಗ್ಯ ಸಚಿವ ಡಾ. ಸ್ಪಷ್ಟನೆ ನೀಡಿದ್ದಾರೆ. ಗಡಿ ರಾಜ್ಯದ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಕೇರಳ ಸರ್ಕಾರದ ಆರೋಪವನ್ನು ಅವರು ನಿರಾಕರಿಸಿದ್ದಾರೆ. ಕೋವಿಡ್ ಪ್ರಕರಣಗಳ ಸಂಖ್ಯೆ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಎರಡನೇ ಅಲೆ ಹಾಗೂ ರೂಪಾಂತರಿ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಅಂತರರಾಜ್ಯ ಸಂಚಾರಕ್ಕೆ ಕೆಲವೊಂದು ನಿಯಮಾವಳಿಗಳನ್ನು ಮಾಡಲಾಗಿದೆ. ಈ ವಿಚಾರವನ್ನು ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ‘ಕರ್ನಾಟಕ ಮತ್ತು ಕೇರಳ ನಡುವೆ ಅಂತರರಾಜ್ಯ ಪ್ರಯಾಣವನ್ನು ನಿಷೇಧ ಮಾಡಲಾಗಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರು 72 ಗಂಟೆಗಳಿಗಿಂತ ಹಳೆಯದಲ್ಲದ ಆರ್ ಟಿ-ಪಿಸಿರ್ ಪರೀಕ್ಷಾ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಮಾರ್ಗಸೂಚಿ ಜಾರಿ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ದಕ್ಷಿಣ ಕನ್ನಡ ಹಾಗೂ ಕೇರಳ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಚರಿಸುತ್ತಾರೆ. ವೈದ್ಯಕೀಯ ಹಾಗೂ ವ್ಯವಹಾರಿಕ ಸಂಪರ್ಕದ ಕಾರಣಕ್ಕಾಗಿ ಜನರ ಓಡಾಟ ಹೆಚ್ಚಿದೆ. ಆದರೆ ಇದೀಗ ಕೆಲವು ಪ್ರದೇಶಗಳಲ್ಲಿ ಗಡಿಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ ಎಂಬ ಆರೋಪ ಕೇರಳದ ಜನರು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ವಿಚಾರ ಹೆಚ್ಚಾಗಿ ಚರ್ಚೆಗೆ ಗ್ರಾಸವಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದ ವಿರುದ್ಧವಾಗಿ ಕೇರಳದಲ್ಲಿ ಪ್ರತಿಭಟನೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ಡಾ. ಕೆ ಸುಧಾಕರ್ ಕೇರಳದ ಆರೋಪವನ್ನು ನಿರಾಕರಣೆ ಮಾಡಿದ್ದಾರೆ.
from India & World News in Kannada | VK Polls https://ift.tt/2OXBume