ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ವ್ಯಕ್ತಿಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೋಳ್ಯಾನಟ್ಟಿ ಗ್ರಾಮದ ಬಾಳಪ್ಪಾ ದಿನ್ನಿ, ಬಸವರಾಜ ಉಪ್ಪಾರ ಮತ್ತು ಸಂಪಗಾಂವ್‌ನ ಮಂಜುನಾಥ ಬೀಡಿ ಬಂಧಿತ ಆರೋಪಿಗಳು. ಬೆಳಗಾವಿ ತಾಲೂಕಿನ ಸೋಮನಟ್ಟಿ ಗ್ರಾಮದ ಸಾಗರ ಗಂಗಪ್ಪ ಪೂಜೇರಿ (23) ಕೊಲೆ ಪ್ರಕರಣದ ದೂರಿನಡಿ ಇವರನ್ನು ಬಂಧಿಸಲಾಗಿದೆ. ಕೊಲೆಗೆ ಮೂಲ ಕಾರಣ ಎಂದು ಹೇಳಲಾದ ಸಾಗರ ಪೂಜೇರಿ ಅವರ ಪತ್ನಿ ನಿಂಗಮ್ಮ ಪೂಜೇರಿಯನ್ನು ಬಂಧಿಸಲಾಗುತ್ತಿದೆ ಎಂದು ಬೆಳಗಾವಿ ಡಿಸಿಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ. ಸುಪಾರಿ ಕೊಟ್ಟ ಪತ್ನಿ! ಬೆಳಗಾವಿ ನಗರದ ಮಹಾದ್ವಾರ ರಸ್ತೆಯಲ್ಲಿರುವ ಸ್ಟೀಲ್ ಅಂಗಡಿಯೊಂದರಲ್ಲಿಕೆಲಸ ಮಾಡುತ್ತಿದ್ದ ಸಾಗರ ಪೂಜೇರಿ ಫೆ.11ರಂದು ಕಾಣೆಯಾಗಿದ್ದಾರೆ ಎಂದು ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಾರ್ಕೆಟ್ ಎಸಿಪಿ ಎಸ್.ಆರ್. ಕಟ್ಟಿಮನಿ ಅವರ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸಿತ್ತು. ಈ ಮಧ್ಯೆ ಸಾಗರ ಅವರ ತಂದೆ ಗಂಗಪ್ಪ ಪೂಜೇರಿ ಅವರು ಠಾಣೆಗೆ ಬಂದು, ಸಾಗರನ ಪತ್ನಿ ನಿಂಗಮ್ಮ ಪೂಜೇರಿ ಅವರ ಪ್ರೇರಣೆಯಿಂದಲೇ ಕೊಲೆ ನಡೆದಿದೆ ಎಂದು ಮೂವರು ಆರೋಪಿಗಳ ಹೆಸರು ಸಮೇತ ಫೆ.22ರಂದು ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಜೋಯಿಡಾ ಬಳಿ ಹತ್ಯೆಗಂಗಪ್ಪ ಅವರು ನೀಡಿದ ದೂರಿನ ಪ್ರಕಾರ, ಕೊಲೆಯಾದ ಸಾಗರ ಮತ್ತು ಕೊಲೆ ಆರೋಪಿ ಬಾಳಪ್ಪಾ ಅವರ ಪತ್ನಿಯರು ಅಕ್ಕ, ತಂಗಿಯರು. ಆದರೆ, ಬಾಳಪ್ಪಾ ಮತ್ತು ಸಾಗರನ ಪತ್ನಿ ನಿಂಗಮ್ಮನ ನಡುವೆ ಅನೈತಿಕ ಸಂಬಂಧ ಇತ್ತು. ನಿಂಗಮ್ಮ ನಿತ್ಯ ಪತಿ ಸಾಗರನೊಂದಿಗೆ ಜಗಳ ಮಾಡುತ್ತಿದ್ದಳು. ಹಾಗಾಗಿ ಆಕೆಯೇ ಸಾಗರನ ಕೊಲೆಗೆ ಸುಪಾರಿ ಕೊಟ್ಟಿದ್ದಾಳೆ ಎಂದು ಹೇಳಿದ್ದಾರೆ. ತನ್ನ ಪತಿ ಸಾಗರನ ಕೊಲೆ ಮಾಡಿದರೆ ತನ್ನ ಬಳಿ ಇರುವ ಬಂಗಾರ ಕೊಡುವುದಾಗಿ ನಿಂಗಮ್ಮ ಹೇಳಿದ್ದಳು. ಬಂಗಾರದ ಆಸೆಗಾಗಿ ಇನ್ನಿಬ್ಬರು ಆರೋಪಿಗಳು ಬಾಳಪ್ಪನೊಂದಿಗೆ ಕೈ ಜೋಡಿಸುತ್ತಾರೆ. ಉಳವಿಯಲ್ಲಿ ಪತಿ, ಪತ್ನಿ ಜಗಳ ಬಿಡಿಸುವವರಿದ್ದಾರೆ ಎಂದು ಹೇಳಿ ಸಾಗರನನ್ನು ಕಾರಿನಲ್ಲಿಉಳವಿಗೆ ಕರೆದುಕೊಂಡು ಹೋಗುತ್ತಾರೆ. ಹೋಗುವಾಗ ದಾರಿಯಲ್ಲಿಯೇ ಸಾಗರನಿಗೆ ಮದ್ಯ ಕುಡಿಸುತ್ತಾರೆ. ಬಳಿಕ ಜೋಯಿಡಾ ತಾಲೂಕಿನ ಗಣೇಶಗುಡಿ ಬಳಿ ಸಾಗರನ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿ ಕಾಡಿನಲ್ಲಿ ಶವ ಎಸೆದು ಬಂದಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಎಸಿಪಿ ಎಸ್.ಆರ್. ಕಟ್ಟಿಮನಿ ತಿಳಿಸಿದ್ದಾರೆ.
from India & World News in Kannada | VK Polls https://ift.tt/2ZQJHel