ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಭಗವದ್ಗೀತೆಯ ಎಲೆಕ್ಟ್ರಾನಿಕ್ ಆವೃತ್ತಿ ಹಾಗೂ ಪ್ರಧಾನಿ ಮೋದಿ ಭಾವಚಿತ್ರ ಸಮೇತ, ಒಟ್ಟು 19 ಉಪಗ್ರಹಗಳನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ಇಸ್ರೋದ ಹೆಮ್ಮೆಯ PSLV-C51 ರಾಕೆಟ್ ಇಂದು(ಫೆ.28-ಭಾನುವಾರ) ಯಶಸ್ವಿ ಉಡಾವಣೆ ಕಂಡಿತು. ಬ್ರೆಜಿಲ್ ದೇಶದ 637 ಕೆಜಿ ತೂಕದ ಅಮೆಜೋನಿಯಾ-1 ಉಪಗ್ರಹವೂ ಸೇರಿದಂತೆ ಒಟ್ಟು 19 ಉಪಗ್ರಹಗಳನ್ನು ಹೊತ್ತ PSLV-C51 ರಾಕೆಟ್, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿ ಉಡಾವಣೆ ಕಂಡಿದೆ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಇಂದು(ಫೆ.28-ಭಾನುವಾರ) ಯಶಸ್ವಿ ಉಡಾವಣೆ ಕಂಡ ಉಪಗ್ರಹಗಳ ಪೈಕಿ ಎಸ್ಡಿ ಸ್ಯಾಟ್ ಉಪಗ್ರಹದ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿದ್ದು, ಭಗವದ್ಗೀತೆಯ ಎಲೆಕ್ಟ್ರಾನಿಕ್ ಆವೃತ್ತಿಯನ್ನು ಹೊಂದಿರುವುದು ವಿಶೇಷ. ಎನ್ಎಸ್ಐಎಲ್ಗಾಗಿ ಮೀಸಲಾದ ಮೊದಲ ಪಿಎಸ್ಎಲ್ವಿ ವಾಣಿಜ್ಯ ಮಿಷನ್ ಇದಾಗಿದ್ದು, ಇಸ್ರೋದ 2021ರ ಮೊದಲ ಬಾಹ್ಯಾಕಾಶ ಯೋಜನೆ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಇನ್ನು ಇಸ್ರೋದ ಈ ಐತಿಹಾಸಿಕ ಸಾಧನೆಗೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದು, ಇಸ್ರೋದ ವೈಜ್ಞಾನಿಕ ಸಾಧನೆಯನ್ನು ಕೊಂಡಾಡಿದ್ದಾರೆ.
from India & World News in Kannada | VK Polls https://ift.tt/37UK4sA