ಪುದುಚೇರಿ: ಕಾಂಗ್ರೆಸ್ ಪಕ್ಷದಲ್ಲಿ ಅರ್ಹತೆಗೆ ಯಾವುದೇ ಸ್ಥಾನವಿಲ್ಲ. ಕಾಂಗ್ರೆಸ್ ಕೇವಲ ವಂಶ ರಾಜಕಾರಣಕ್ಕೆ ಮಾತ್ರ ಮಣೆ ಹಾಕುತ್ತದೆ ಎಂದು ಕೇಂದ್ರ ಗೃಹ ಸಚಿವ ಗುಡುಗಿದ್ದಾರೆ. ಪುದುಚೇರಿಯ ಕಾರೈಕಲ್ನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಅರ್ಹರನ್ನು ಕಡೆಗಣಿಸುತ್ತಿರುವುದರಿಂದಲೇ ದೇಶಾದ್ಯಂತ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಆ ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ ಎಂದು ಹರಿಹಾಯ್ದರು. ಕಾಂಗ್ರೆಸ್ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿ ದಶಕಗಳೇ ಉರುಳಿವೆ. ಇದೇ ಕಾರಣಕ್ಕೆ ರಾಷ್ಟ್ರ ರಾಜಕಾರಣದಲ್ಲಿ ಆ ಪಕ್ಷ ಹಂತ ಹಂತವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದರು. ಪುದುಚೇರಿಯಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭವಿಷ್ಯ ನುಡಿದ ಅಮಿತ್ ಶಾ, ನನ್ನ ರಾಜಕೀಯ ಅನುಭವದ ಆಧಾರದ ಮೇಲೆ ನಾನು ಪುದುಚೇರಿಯಲ್ಲಿ ಎನ್ಡಿಎ ಸರ್ಕಾರ ರಚಿಸುವ ದಾವೆ ಮಾಡುತ್ತಿದ್ದೇನೆ ಎಂದು ಹೇಳಿದರು. ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 15 ಸಾವಿರ ಕೋಟಿ ರೂ.ಗಳನ್ನು ನೀಡಿದೆ. ಆದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾದ ಮುಖ್ಯಮಂತ್ರಿ ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಗಾಂಧಿ ಪರಿವಾರದ ಸೇವೆಗಾಗಿ ದೆಹಲಿಗೆ ಕಳುಹಿಸಿದೆ ಎಂದು ಅಮಿತ್ ಶಾ ಇದೇ ವೇಳೆ ಗಂಭೀರ ಆರೋಪ ಮಾಡಿದರು. ಪುದುಚೇರಿಯಲ್ಲಿ ಶೇ.75ರಷ್ಟು ಯುವ ಸಮುದಾಯ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ. ಒಂದು ವೇಳೆ ಎನ್ಡಿಎ ಸರ್ಕಾರ ರಚಿಸಿದರೆ ನಿರುದ್ಯೋಗ ಸಮಸ್ಯೆಯನ್ನು ಶೇ.40ರಷ್ಟು ನಿವಾರಣೆ ಮಾಡಲಾಗುವುದು ಎಂದು ಇದೇ ವೇಳೆ ಆಮಿತ್ ಶಾ ಭರವಸೆ ನೀಡಿದರು. ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಈ ಭ್ರಷ್ಟ ಸರ್ಕಾರವನ್ನು ಕಿತ್ತೆಸೆದು ಅಭಿವೃದ್ಧಿ ಪರ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಮತದಾರ ಮಣೆ ಹಾಕಲಿದ್ದಾನೆ ಎಂಬ ಭರವಸೆ ಇರುವುದಾಗಿ ಅಮಿತ್ ಶಾ ಹೇಳಿದರು.
from India & World News in Kannada | VK Polls https://ift.tt/3qWMLkZ