ಅಬು ದಾಬಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ಘೋಷಣೆಯನ್ನು ಸ್ವಾಗತಿಸಿರುವ ಸಂಯುಕ್ತ ಅರಬ್ ಸಂಸ್ಥಾನ(), ಸಂಬಂಧ ಸುಧಾರಣೆಯಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಅಭಿಪ್ರಾಯಪಟ್ಟಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಯುಎಇ ವಿದೇಶಾಂಗ ಇಲಾಖೆ, ಭಾರತ ಹಾಗೂ ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದ ಘೋಷಣೆಯನ್ನು ಸ್ವಾಗತಿಸುವುದಾಗಿ ಹೇಳಿದೆ. ಉಭಯ ದೇಶಗಳನ್ನು ತನ್ನ ಸ್ನೇಹಪರ ದೇಶಗಳು ಎಂದು ಕರೆದಿರುವ ಯುಎಇ, ಮಾತುಕತೆ ಮೂಲಕ ಭಾರತ ಹಾಗೂ ಪಾಕಿಸ್ತಾನ ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿವೆ ಎಂಬ ಭರವಸೆ ಇದೆ ಎಂದು ಹೇಳಿದೆ. ಇದೇ ವೇಳೆ ಉಭಯ ದೇಶಗಳ ಗಡಿ ಸಮಸ್ಯೆಯನ್ನು 'ವಿವಾದಿತ' ಎಂದು ಬಣ್ಣಿಸಿರುವ ಯುಎಇ, ಪ್ರಮುಖವಾಗಿ ಕಾಶ್ಮೀರವನ್ನು ವಿವಾದಿತ ಗಡಿ ಎಂದು ಕರೆದಿದೆ. ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳೊಂದಿಗೆ ಐತಿಹಾಸಿಕ ಗಾಢ ಸಂಬಂಧ ಹೊಂದಿರುವುದಾಗಿ ಹೇಳಿರುವ ಯುಎಇ, ಉಭಯ ದೇಶಗಳು ಕದನ ವಿರಾಮ ಒಪ್ಪಂದವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಭರವಸೆ ಇದೆ ಎಂದು ಹೇಳಿದೆ. ಅಲ್ಲದೇ ರಾಜತಾಂತ್ರಿಕ ಶಾಂತಿ ಮಾತುಕತೆಗಳ ಮೂಲಕ ಈ ಪ್ರದೇಶದಲ್ಲಿ ಶಾಶ್ವತ ಶಾಂತಿ ಹಾಗೂ ಸ್ಥಿರತೆ ಸ್ಥಾಪನೆಗೆ ಒತ್ತು ನೀಡಲಿವೆ ಎಂದೂ ಯುಎಇ ಭರವಸೆ ವ್ಯಕ್ತಪಡಿಸಿದೆ. ಈಗಾಗಲೇ ವಿಶ್ವಸಂಸ್ಥೆ ಹಾಗೂ ಅಮೆರಿಕ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ನಡುವಿನ ಕದನ ವಿರಾಮ ಒಪ್ಪಂದ ಘೋಷಣೆಯನ್ನು ಸ್ವಾಗತಿಸಿದ್ದು, ಈ ಸಾಲಿಗೆ ಇದೀಗ ಯುಎಇ ಸೇರಿದೆ. ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಗುಂಟ 2003ರಲ್ಲಿ ಜಾರಿಗೆ ತರಲಾದ ಕದನ ವಿರಾಮ ಒಪ್ಪಂದವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಕುರಿತು, ಕಳೆದ ಗುರುವಾರ ಭಾರತ ಹಾಗೂ ಪಾಕಿಸ್ತಾನ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
from India & World News in Kannada | VK Polls https://ift.tt/3uFXMJM