ಬೆಂಗಳೂರು: ವಿವಿ ಪುರಂನ ಪೊಬ್ಬತಿ ಹೆರಿಗೆ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಆಶಾ ಕಾರ್ಯಕರ್ತೆ ಹಾಗೂ ಲ್ಯಾಬ್ ಟೆಕ್ನಿಷಿಯನ್ನನ್ನು ವಜಾಗೊಳಿಸಲಾಗಿದೆ. ಈ ಕುರಿತಾಗಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಆಸ್ಪತ್ರೆಯಲ್ಲಿ ಕೊರೊನ ನೆಗೆಟಿವ್ ಎಂದು ಸುಳ್ಳು ವರದಿ ನೀಡುತ್ತಿರುವುದು ಮಾಧ್ಯಮದ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳ ತಂಡ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿತ್ತು. ಪರಿಶೀಲನೆಯ ವೇಳೆ ಕೋವಿಡ್ ನೆಗೆಟಿವ್ ಎಂದು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲ್ಯಾಬ್ ಟೆಕ್ನೀಷಿಯನ್ ಹಾಗೂ ಆಶಾ ಕಾರ್ಯಕರ್ತೆ ಸುಳ್ಳು ವರದಿ ನೀಡುತ್ತಿದ್ದದ್ದು ಗಮನಕ್ಕೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಚಿವ ಡಾ. ಕೆ ಸುಧಾಕರ್ ಅವರಿಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಪೊಬ್ಬತ್ತಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆ ಶಾಂತಿ ಹಾಗೂ ಲ್ಯಾಬ್ ಟೆಕ್ನಿಷಿಯನ್ ಮಹಾಲಕ್ಷ್ಮಿ ಅವರ ಕರ್ತವ್ಯ ಲೋಪವನ್ನು ಗಂಭೀರವಾಗಿ ಪರಿಗಣಿಸಿ ತನಿಖಾ ವರದಿ ಆಧಾರದ ಮೇಲೆ ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಈ ಕುರಿತಾಗಿ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ. ಗುತ್ತಿಗೆ ಅಥವಾ ಖಾಯಂ ಯಾವುದೇ ನೌಕರರೇ ಆಗಿರಲಿ ಕರ್ತ್ಯವ ಲೋಪ ಎಸಗಿದರೆ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ ಎಂದು ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
from India & World News in Kannada | VK Polls https://ift.tt/3kAvuL3