ಕೆ.ಎಲ್.ಗೋಪಾಲಕೃಷ್ಣ ಶೃಂಗೇರಿ ಚಿಕ್ಕಮಗಳೂರು: ಈ ವರ್ಷ ಆಶ್ಲೇಷ ಮಳೆಯ ಆರ್ಭಟ ತಾಲೂಕಿನಲ್ಲಿ ಜೋರಾಗಿಯೇ ಇತ್ತು. ಪ್ರವಾಹ ಇಳಿಕೆಯಾಗದೆ 4-5ದಿನ ಹಾಗೆಯೇ ಮುಂದುವರಿದಿತ್ತು. ನಂತರ ಉತ್ತರ ಮಳೆಯು ಜೋರಾಗಿಯೇ ಬಂದಿದ್ದು, ಪ್ರವಾಹ ಕಂಡಿತ್ತು. ಪುನರ್ವಸು ಹಾಗೂ ಪುಷ್ಯ ನಾಪತ್ತೆಯಾಗಿತ್ತು. ಇದೀಗ ಚಂಡಮಾರುತದ ಹಾವಳಿಯಿಂದ ಜಿಟಿ-ಜಿಟಿ ಮಳೆ ಎಡೆಬಿಡದೆ ಸುರಿಯುತ್ತಿದೆ. ಬೆಳೆ ನಷ್ಟದ ಭೀತಿ ತಾಲೂಕಿನಲ್ಲಿ ಸುಮಾರು 2,100 ಎಕರೆ ಪ್ರದೇಶದಲ್ಲಿ ತೋಟವಿದ್ದು, ಬೆಳೆಗಾರರು ಈ ವರ್ಷ ತೀವ್ರ ತೊಂದರೆಗೆ ಸಿಲುಕಿದ್ದಾರೆ. ವಾತಾವರಣ ಮತ್ತು ಅಕಾಲಿಕ ಮಳೆಯಿಂದಾಗಿ ಉತ್ತಮ ಗುಣಮಟ್ಟದ ಅಡಕೆ ತಯಾರಿಸಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಅಡಕೆ ತೋಟದಲ್ಲಿ ಅಡಕೆ ಕಾಯಿಗಳು ಬಲಿತಿದ್ದು, ಕೊಯ್ಲು ಮಾಡಲು ಸರಿಯಾದ ಸಮಯವಾಗಿದೆ. ಆದರೆ, ಬಿಸಿಲಿನ ವಾತಾವರಣ ಇಲ್ಲದೆ ಕೊಯ್ಲು ಮಾಡಲು ತೀವ್ರ ತೊಂದರೆಯಾಗಿದೆ. ತಾಲೂಕಿನಲ್ಲಿ ಕೆಲವೆಡೆ ಅಡಕೆ ಕೊಯ್ಲು ಪ್ರಾರಂಭವಾಗಿದೆ. ಬೇಯಿಸಿದ ಅಡಕೆ ಒಣಗಿಸಲು ಬಿಸಿಲಿನ ನಿರೀಕ್ಷೆಯಲ್ಲಿದ್ದಾರೆ. ಚಪ್ಪರದಲ್ಲಿ ಹರಡಿದ್ದ ಅಡಕೆಯನ್ನು ರಾಶಿ ಹಾಕಿ ಟಾರ್ಪಲ್ ಮುಚ್ಚಲಾಗಿದೆ. ಇದೇ ವಾತಾವರಣ ಮುಂದುವರಿದರೆ ಸಂಸ್ಕರಿತ ಅಡಕೆ ಶಿಲೀಂಧ್ರಬಾಧೆಗೆ ಒಳಗಾಗಿ ಅಡಕೆ ಹಾಳಾಗುವ ಆತಂಕ ಎದುರಾಗಿದೆ. ಹೊಗೆತಟ್ಟಿ, ಡ್ರೈಯರ್‌ನಲ್ಲಿ ಒಣಗಿಸಿದ ಅಡಕೆಗೆ ಮಾರುಕಟ್ಟೆಯಲ್ಲೂ ಉತ್ತಮ ಧಾರಣೆ ದೊರೆಯದಿರುವುದರಿಂದ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ ಬೆಳೆಗಾರನ ಸ್ಥಿತಿ. ಕೊಳೆ ರೋಗ ಸಾಧ್ಯತೆ ಕೊಯ್ಲು ವಿಳಂಬವಾದಂತೆಲ್ಲ ಅಡಕೆ ಹಣ್ಣಾಗುತ್ತಿರುವುದು ಒಂದೆಡೆಯಾದರೆ ಬಲಿತ ಅಡಕೆ ಕಾಯಿಗೆ ಕೊಳೆರೋಗ ಬರುವ ಸಾಧ್ಯತೆ ಇದೆ. ಕೆಲವೆಡೆ ಈಗಾಗಲೇ 2-3 ಬಾರಿ ಬೋರ್ಡೋ ಸಿಂಪಡಣೆ ಮಾಡಲಾಗಿದೆ. ಇದೇ ರೀತಿ ಮುಂದುವರಿದರೆ ಅಡಕೆಗೆ ಕೊಳೆರೋಗ ಎದುರಾಗಲಿದೆ. ಒಟ್ಟಾರೆ ರೈತರ ಬದುಕು ಹೈರಾಣಾಗಿದೆ. ಒಂದೆಡೆ ಕಾರ್ಮಿಕರ ಕೊರತೆ, ಮತ್ತೊಂದೆಡೆ ವಾತಾವರಣ ಬದಲಾವಣೆಯಿಂದ ಸಣ್ಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಣಗದೇ ಇರುವ ಅಡಕೆ ಕಣ್ಣೆದುರೇ ಹಾಳಾಗುತ್ತಿದೆ. ಹಣ್ಣಾದ ಅಡಕೆ ಒಣಗಲು ಹಾಕಿದಲ್ಲಿಯೇ ಮೊಳಕೆಯೊಡೆಯುತ್ತಿದೆ. ಹೆಬ್ಬಿಗೆ ಕೃಷ್ಣಮೂರ್ತಿ, ಬೆಳೆಗಾರರು, ಶೃಂಗೇರಿ ಈ ವರ್ಷ ಪ್ರಸ್ತುತ ಅಡಕೆ ಧಾರಣೆ ಉತ್ತಮವಾಗಿದ್ದರೂ, ಬೆಳೆಯನ್ನು ಕಟಾವು ಮಾಡಿ ಒಣಗಿಸಲು ತೊಂದರೆಯಾಗುತ್ತಿದೆ. ಕಳೆದ ವರ್ಷ ಮಾಮ್ಕೋಸ್ ಶಾಖೆಗೆ 15 ಸಾವಿರಕ್ಕೂ ಹೆಚ್ಚು ಅಡಕೆ ಮೂಟೆ ಬಂದಿದ್ದು, ಈ ವರ್ಷ ಅಡಕೆ ಫಸಲು ಕಡಿಮೆಯಾಗುವ ಸಾಧ್ಯತೆ ಇದೆ. ಈಗಾಗಲೇ ತಾಲೂಕಿನಲ್ಲಿ ಹಳದಿ ಎಲೆ ರೋಗದಿಂದ ಬೆಳೆಗಾರ ತತ್ತರಿಸಿದ್ದು, ಒಟ್ಟಾರೆ ಅಡಕೆಯ ಫಸಲು ಕಡಿಮೆಯಾಗುವ ಸಾಧ್ಯತೆ ಕಂಡು ಬರುತ್ತಿದೆ. ಎ. ಸುರೇಶ್‌ಚಂದ್ರ ಅಂಬ್ಲೂರು, ಮಾಮ್ಕೋಸ್ ನಿರ್ದೇಶಕ
from India & World News in Kannada | VK Polls https://ift.tt/2HANart