
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಮುಂದಾಗಿದೆ. ಈ ಬಾರಿ ಪ್ರವಾಹ ಎಂಬ ಪ್ರಬಲ ಅಸ್ತ್ರ ಕಾಂಗ್ರೆಸ್‌ಗೆ ಸಿಕ್ಕಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಬಂದಿದ್ದು ಸಾವಿರಾರು ಜನರು ಸಂತ್ರಸ್ತರಾಗಿದ್ದಾರೆ. ಪ್ರವಾಹ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ಎಡವಿದ್ದು ವಿರೋಧ ಪಕ್ಷವಾದ ಕಾಂಗ್ರೆಸ್ ಈ ವಿಚಾರವನ್ನೇ ಇಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಮುಂದಾಗಿದೆ. ಇದರ ಆರಂಭಿಕ ಭಾಗವಾಗಿ ವಿರೋಧ ಪಕ್ಷದ ನಾಯಕ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸರಡಗಿ ಗ್ರಾಮದಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ಹತ್ತಿ ಬೆಳೆಯನ್ನು ಸಿದ್ದರಾಮಯ್ಯ ಅವರು ವೀಕ್ಷಿಸಿ ರೈತರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಭಾನುವಾರವೂ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಮುಡಬಿ, ಕಲಖೋರಾ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಪ್ರವಾಹದಿಂದ ಬೆಳೆ ಕಳೆದುಕೊಂಡಿರುವ ರೈತರೊಂದಿಗೆ ಮಾತುಕತೆ ನಡೆಸಿ ಅವರ ಅಹವಾಲು ಆಲಿಸಿದ್ದಾರೆ. ತಮ್ಮ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರ್ಕಾರ ಪ್ರವಾಹ ನಿಯಂತ್ರಣ ಮಾಡುವಲ್ಲಿ ಎಡವಿದೆ ಎಂಬುವುದು ಕಾಂಗ್ರೆಸ್ ಆರೋಪವಾಗಿದೆ. ಪ್ರವಾಹದಿಂದಾಗಿ ಸುಮಾರು ಆರುಕಾಲು ಲಕ್ಷ ಎಕರೆಯಲ್ಲಿ ರೈತರು ಬೆಳೆ ಕಳೆದುಕೊಂಡಿದ್ದಾರೆ. ಕೇವಲ ಬೆಳೆಹಾನಿಯಿಂದಲೇ 1,500 ಕೋಟಿ ನಷ್ಟವಾಗಿದೆ.,1700 ಮನೆಗಳು ಬಿದ್ದಿವೆಯಂತೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಲ್ಲಿಯ ವರೆಗೆ ಪೈಸೆ ಪರಿಹಾರವನ್ನೂ ಕೊಟ್ಟಿಲ್ಲ ಎಂಬುವುದು ಕಾಂಗ್ರೆಸ್ ಆರೋಪವಾಗಿದೆ. ರೈತರ ಬೆಳೆನಷ್ಟಕ್ಕೆ ಪರಿಹಾರ ನೀಡುವಾಗ ಕೇಂದ್ರಸರ್ಕಾರದ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಿದರೆ ರೈತರ ಕಷ್ಟ ದೂರವಾಗಲಾರದು.ನಾನು ಒಂದು ಹೆಕ್ಟೇರ್ ಗೆ 25,000 ಪರಿಹಾರ ಕೊಟ್ಟಿದ್ದೆ.ಕಳೆದ ವರ್ಷದ ಪ್ರವಾಹದಿಂದಾಗಿರುವ ಹಾನಿಗೆ ಇಲ್ಲಿಯ ವರೆಗೆ ಪರಿಹಾರ ನೀಡಿಲ್ಲ ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರವಾಹ ವಿಚಾರವನ್ನೇ ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳುವ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಅಷ್ಟೇ ಅಲ್ಲದೆ ವಿಶೇಷ ಅಧಿವೇಶನಕ್ಕೂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಪ್ರವಾಹ ಪರಿಹಾರ ಹಾಗೂ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವಿಫಲತೆ ಕಾಂಗ್ರೆಸ್ ಪಾಲಿಗೆ ಸಿಕ್ಕ ದೊಡ್ಡ ಅಸ್ತ್ರವಾಗಿದೆ. ಮುಂದಿನ ದಿನಗಳಲ್ಲಿ ಈ ಅಸ್ತ್ರವನ್ನು ಕಾಂಗ್ರೆಸ್ ಹೇಗೆ ಉಪಯೋಗ ಮಾಡುತ್ತೆ ಎಂಬುವುದು ಸದ್ಯದ ಕುತೂಹಲ.
from India & World News in Kannada | VK Polls https://ift.tt/3os5Hr6