ಬೆಂಗಳೂರು: ಶನಿವಾರ ಮಧ್ಯಾಹ್ನ ನಿಧನರಾದ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ (66) ಬಿಜೆಪಿಯ ಪಾಲಿನ ಟ್ರಬಲ್ ಶೂಟರ್ ಆಗಿದ್ದರು. ಅರುಣ್ ಜೇಟ್ಲಿ ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದರು. ಅರುಣ್ ಜೇಟ್ಲಿಗೆ ಕರ್ನಾಟಕದ ನಂಟು ಕೂಡ ಹೆಚ್ಚಾಗಿಯೇ ಇತ್ತು. ನ್ಯಾಯವಾದಿಯಾಗಿದ್ದ ಅರುಣ್ ಜೇಟ್ಲಿಗೆ ಕರ್ನಾಟಕ ರಾಮಾ ಜೋಯಿಸ್ ಅವರ ಜತೆ ನಿಕಟ ಸಂಬಂಧ ಇತ್ತು. 1980-90ರ ದಶಕದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ಕಾಲದಿಂದಲೂ ಅರುಣ್ ಜೇಟ್ಲಿ ಮತ್ತು ರಾಮಾ ಜೋಯಿಸ್ ನಡುವೆ ಉತ್ತಮ ನಂಟು ಇತ್ತು. ನಂತರ ಕರ್ನಾಟಕದಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಿದ್ದ ಸಂದರ್ಭದಲ್ಲಿ ಅರುಣ್ ಜೇಟ್ಲಿ ಉಸ್ತುವಾರಿಯಾಗಿದ್ದರು. 2002ರಲ್ಲಿ ಜೇಟ್ಲಿಗೆ ರಾಜ್ಯ ಉಸ್ತುವಾರಿ ಹೆಗಲಿಗೆ ಬಿತ್ತು. ಅಲ್ಲಿಂದ ರಾಜ್ಯದಲ್ಲಿ ಆರಂಭವಾದ ಜೇಟ್ಲಿ ಜೈತ್ರಯಾತ್ರೆ ಪಕ್ಷವನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸುವ ಮಟ್ಟಕ್ಕೂ ಹೋಯಿತು. ಬಿಜೆಪಿಗೆ 110 ಸ್ಥಾನ ಬಂದು ಕೂದಲೆಳೆ ಅಂತರದಲ್ಲಿ ಬಹುಮತ ತಪ್ಪಿದಾಗ ನಡೆದ ವಿದ್ಯಮಾನಗಳ ಹಿಂದೆ ಅರುಣ್ ಜೇಟ್ಲಿ ತಂತ್ರಗಾರಿಕೆಯೂ ಇತ್ತು. ಅದರಲ್ಲೂ 2008ರಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ರಾಜ್ಯ ಬಿಜೆಪಿಯಲ್ಲಿ ಉಂಟಾದ ವಿವಾದ, ಅಸಮಾಧಾನ, ಬಂಡಾಯ ಎಲ್ಲವನ್ನೂ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದು ಅರುಣ್ ಜೇಟ್ಲಿ. ನ್ಯಾಯವಾದಿಯಾಗಿದ್ದ ಅರುಣ್ ಜೇಟ್ಲಿ ಪಕ್ಕಾ ನ್ಯಾಯಾಧೀಶರಂತೆ ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಅನಂತಕುಮಾರ್, ಯಡಿಯೂರಪ್ಪ, ಡಿವಿ ಸದಾನಂದಗೌಡ ಅಲ್ಲದೇ ರಾಜ್ಯದ ಪ್ರಮುಖ ನ್ಯಾಯವಾದಿಗಳ ಜತೆಗೂ ಅರುಣ್ ಜೇಟ್ಲಿ ನಿಕಟ ಸಂಪರ್ಕ ಹೊಂದಿದ್ದರು. ಅರುಣ್ ಜೇಟ್ಲಿ ಜತೆಗಿನ ಕರ್ನಾಟಕದ ನಂಟು ಹಸಿರಾಗಿಯೇ ಉಳಿದಿದೆ.
from India & World News in Kannada | VK Polls https://ift.tt/2NughNW