ಹೊಸದಿಲ್ಲಿ: ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ದಾಖಲೆಯ ಅಂತಿಮ ಪಟ್ಟಿ ಪ್ರಕಟಣೆಯ ಬಳಿಕ ಈಶಾನ್ಯ ರಾಜ್ಯಗಳಲ್ಲಿ, ವಿಶೇಷವಾಗಿ ಮಿಜೋರಾಂ, ಮಣಿಪುರ ಮತ್ತು ಮೇಘಾಲಯದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. 19 ಲಕ್ಷಕ್ಕೂ ಅಧಿಕ ಜನರು ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿದ್ದಾರೆ. 3.11 ಕೋಟಿ ಜನರನ್ನು ಎನ್‌ಆರ್‌ಸಿಗೆ ಸೇರಿಸಲಾಗಿದೆ. ಸುಪ್ರೀಂ ಕೋರ್ಟ್ ವಿಚಕ್ಷಣೆಯಲ್ಲಿ ಕೈಗೊಳ್ಳಲಾದ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಹಾಗೂ ಸರ್ಹ ನಾಗರಿಕರನ್ನು ಗುರುತಿಸುವ ಡೇಟಾಬೇಸ್ ಸಿದ್ಧಪಡಿಸುವ ಕಾರ್ಯ ಪೂರ್ಣಗೊಂಡಿದೆ. ಮಿಜೋರಾಂ ಮತ್ತು ಅಸ್ಸಾಂನ ಗಡಿ ಭಾಗದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಮಿಜೋರಾಂ ಉಪ ಐಜಿಪಿ ಲಾಲ್‌ಬಿಯಾಖ್ತಂಗಾ ಖೈಂಗ್ಟೆ ತಿಳಿಸಿದ್ದಾರೆ. ಗಡಿ ಔಟ್‌ಪೋಸ್ಟ್‌ಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. ರಾಜ್ಯದೊಳಗೆ ಯಾವುದೇ ಅಕ್ರಮ ಪ್ರವೇಶವನ್ನು ತಡೆಯಲು ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಮಿಜೋರಾಂನ ಪ್ರಧಾನ ವಿದ್ಯಾರ್ಥಿ ಸಂಘಟನೆ- ಮಿಜೋ ಝಿರ್ಲಾಯ್ ಪವೈ (ಎಂಝಡ್‌ಪಿ)- ರಾಜ್ಯದಲ್ಲೂ ವಿದೇಶೀಯರ ನ್ಯಾಯಾಧಿಕರಣ ಮತ್ತು ಎನ್‌ಆರ್‌ಸಿ ರೂಪಿಸುವಂತೆ ಆಗ್ರಹಿಸುತ್ತಿದೆ. ಕಳೆದ ಮಾರ್ಚ್‌ನಲ್ಲಿ ಮಿಜೋ ವಿಧಾನಸಭೆ 'ಮಿಜೋರಾಂ ಮೈಂಟೆನೆನ್ಸ್ ಆಫ್ ಹೌಸ್‌ಹೋಲ್ಡ್ ರಿಜಿಸ್ಟರ್ಸ್ ಬಿಲ್ 2019' ಅನ್ನು ಅಂಗೀಕರಿಸಿತ್ತು. ಅದರನ್ವಯ ರಾಜ್ಯ ಸರಕಾರ ನಾಗರಿಕರ ಡೇಟಾಬೇಸ್ ತಯಾರಿಸಲು ಅವಕಾಶವಿದೆ. ಸದ್ಯ ರಾಜ್ಯಪಾಲರ ಅಂಕಿತಕ್ಕಾಗಿ ಈ ವಿಧೇಯಕ ಕಾಯುತ್ತಿದೆ. ಇನ್ನೊಂದೆಡೆ ಮಣಿಪುರದಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ. ರಾಜ್ಯದಲ್ಲಿ ಐಎಲ್‌ಪಿ (ಇನ್ನರ್ ಲೈನ್ ಪರ್ಮಿಟ್) ಜಾರಿಗೊಳಿಸಬೇಕೆಂದು ಆಗ್ರಹಿಸಿ ಕೆಲ ಕಾಲದಿಂದ ಪ್ರತಿಭಟನೆಗಳು ನಡೆಯುತ್ತಿವೆ. ಸಂರಕ್ಷಿತ ಪ್ರದೇಶದಲ್ಲಿ ಒಂದು ನಿರ್ದಿಷ್ಟ ಕಾಲಾವಧಿಗೆ ಪ್ರಯಾಣಿಸಲು ಕೇಂದ್ರ ಸರಕಾರ ನೀಡುವ ಪ್ರಯಾಣ ದಾಖಲೆಯೇ ಇನ್ನರ್ ಲೈನ್ ಪರ್ಮಿಟ್ (ಐಎಲ್‌ಪಿ). ಸದ್ಯಕ್ಕೆ ಮೂರು ಈಶಾನ್ಯ ರಾಜ್ಯಗಳಲ್ಲಿ- ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನಲ್ಲಿ ಐಎಲ್‌ಪಿ ವ್ಯವಸ್ಥೆ ಜಾರಿಯಲ್ಲಿದೆ. ಸಾರ್ವಜನಿಕರ ಒತ್ತಡಕ್ಕೆ ಮಣಿದು ಮಣಿಪುರ ವಿಧಾನಸಭೆ ಕೂಡ ಮಣಿಪುರ್ ಪೀಪಲ್ಸ್ ಬಿಲ್ (ಎಂಪಿಬಿ) ಅಂಗೀಕರಿಸಿದೆ. ಇದು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯುತ್ತಿದೆ. ಪ್ರಸ್ತುತ ಎನ್‌ಆರ್‌ಸಿ ಯಿಂದ ಹೊರಗುಳಿದಿರುವ ನಾಗರಿಕರಿಗೆ ಕಾನೂನಿನ ಎಲ್ಲ ಆಯ್ಕೆಗಳೂ ಮುಗಿಯುವ ತನಕ ಬಂಧನ ಭೀತಿ ಇರುವುದಿಲ್ಲ ಎಂದು ಕೇಂದ್ರ ಗೃಹಸಚಿವಾಲಯ ಭರವಸೆ ನೀಡಿದೆ.
from India & World News in Kannada | VK Polls https://ift.tt/2Lj9W5j