ಅಂತಿಮ ಹಂತ ತಲುಪಿದ ಚಂದ್ರಯಾನ-2: ಬಾಹ್ಯಾಕಾಶ ನೌಕೆಯಿಂದ ನಾಳೆ ಬೇರ್ಪಡಲಿರುವ 'ವಿಕ್ರಮ್‌'

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆ ಮಹತ್ವದ ಘಟ್ಟ ತಲುಪಿದ್ದು, ಸೋಮವಾರ (ಸೆಪ್ಟೆಂಬರ್‌ 2) ಅಥವಾ (ಮಧ್ಯರಾತ್ರಿ) ಮಂಗಳವಾರ ಚಂದ್ರನ ಮೇಲೆ ಇಳಿಯುವ ಲ್ಯಾಂಡರ್‌ ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್‌ ಮುಖ್ಯ ನೌಕೆಯಿಂದ ಬೇರ್ಪಡಲಿದೆ. ಸೆಪ್ಟೆಂಬರ್‌ 3ರಂದು ವಿಕ್ರಮ್ ಮತ್ತು ಪ್ರಜ್ಞಾನ್ ಬೇರ್ಪಡಿಸುವ ಕಾರ್ಯ ನಡೆಯಲಿದೆ ಎಂದು ಘೋಷಿಸಿದೆ. ಬಹುತೇಕ ಮಧ್ಯರಾತ್ರಿ 12:10ಕ್ಕೆ (ಮಂಗಳವಾರ) ಈ ಕಾರ್ಯಾಚರಣೆ ನಡೆಯಲಿದೆ. 'ಸಾಮಾನ್ಯವಾಗಿ ಈ ಕಾರ್ಯಾಚರಣೆಯ ಸಮಯವನ್ನು ಅದೇ ದಿನ ನಿಗದಿಪಡಿಸಲಾಗುತ್ತದೆ. ನಾವು ಮೊದಲು ಅಂದಾಜಿಸಿದ ಸಮಯಕ್ಕಿಂತ ಕೆಲವು ಗಂಟೆಗಳ ಮೊದಲೇ ಈ ಕಾರ್ಯಾಚರಣೆ ನಡೆಯುವ ಸಾಧ್ಯತೆಯಿದೆ' ಎಂದು ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದರು. ಸದ್ಯಕ್ಕೆ ಚಂದ್ರಯಾನ-2 ಬಾಹ್ಯಾಕಾಶ ನೌಕೆಯಲ್ಲಿರುವ ಕಕ್ಷೆಗಾಮಿಗೆ ಅಂಟಿಕೊಂಡಿದೆ. ಅವುಗಳನ್ನು ಬೇರ್ಪಡಿಸುವ ಕಾರ್ಯಾಚರಣೆಗೆ ಮೂರು ದಿನಗಳ ಮೊದಲೇ ಸಿದ್ಧತೆ ಆರಂಭವಾಗಿದ್ದು ಘಟನಾವಳಿಗಳ ಅನುಕ್ರಮವನ್ನು ಇಸ್ರೋ ಅಂತಿಮಗೊಳಿಸುತ್ತಿದೆ. ಅವುಗಳನ್ನು ಬೇರ್ಪಡಿಸುವ ಕ್ರಿಯೆ ಕೇವಲ ಕ್ಷಣಮಾತ್ರದಲ್ಲಿ ಮುಗಿದು ಹೋಗುತ್ತದೆ. ಆಗಸ್ಟ್ 30 ಮತ್ತು ಸೆಪ್ಟೆಂಬರ್‌ 1ರ ಎರಡು ಕಾರ್ಯಾಚರಣೆಗಳ ಬಳಿಕ ಸಂಯೋಜಿತ ಬಾಹ್ಯಾಕಾಶ ನೌಕೆ ಬೇರ್ಪಡೆಗೆ ಸೂಕ್ತವಾದ ಕಕ್ಷೆ ತಲುಪಿದೆ. ಅದು ಸರಿಯಾದ ಕಕ್ಷೆಯಲ್ಲಿದ್ದಾಗ ಕಮಾಂಡ್‌ಗಳನ್ನು ರವಾನಿಸಲಾಗುತ್ತದೆ; ಆಗ ಒಂದು ಸೆಕೆಂಡ್‌ಗೂ ಕಡಿಮೆ ಅವಧಿಯಲ್ಲಿ ಲ್ಯಾಂಡರ್ ವಿಕ್ರಮ್‌ ಕಕ್ಷೆಗಾಮಿಯಿಂದ ಬೇರ್ಪಡುತ್ತದೆ ಎಂದು ಚಂದ್ರಯಾನ-2 ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿರುವ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದರು. 'ಅತ್ಯಂತ ತ್ವರಿತವಾಗಿ ಈ ಪ್ರಕ್ರಿಯೆ ಮುಗಿದು ಹೋಗುತ್ತದೆ. ಉಡ್ಡಯನ ವಾಹನದಿಂದ ಉಪಗ್ರಹ ಬೇರ್ಪಡುವಷ್ಟೇ ಕ್ಷಿಪ್ರವಾಗಿ ಇದು ನಡೆಯುತ್ತದೆ' ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್‌ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದರು. ಸೋಮವಾರ ಸಂಯೋಜಿತ ಬಾಹ್ಯಾಕಾಶ ನೌಕೆ ಬೇರ್ಪಡುವಿಕೆಗೆ ಸೂಕ್ತವಾದ ಸ್ಥಾನದಲ್ಲಿದ್ದಾಗ - 121 ಕಿ.ಮೀ X 125 ಕಿ.ಮೀ- ಕಕ್ಷೆಯಲ್ಲಿದ್ದಾಗ ಬೇರ್ಪಡಿಸುವಿಕೆಗೆ ನೀಡಲಾಗುವ ಕಮಾಂಡ್‌ಗಳನ್ನು ಅನುಕ್ರಮವಾಗಿ ರವಾನಿಸುತ್ತದೆ. ನೌಕೆಯಲ್ಲಿರುವ ಕಂಪ್ಯೂಟರ್‌ಗಳು ಸ್ವಾಯತ್ತವಾಗಿ ಈ ಕಾರ್ಯಾಚರಣೆಗಳನ್ನು ಮಾಡಿ ಮುಗಿಸುತ್ತವೆ. ಆರ್ಬಿಟರ್‌ನ ಮೇಲ್ಭಾಗದಲ್ಲಿರುವ ಸಿಲಿಂಡರ್‌ನಾಕಾರದ ರಚನೆಯ (ಇಂಧನ ಟ್ಯಾಂಕ್‌ನ ವಿಸ್ತರಿತ ಭಾಗ) ಮೇಲೆ ಲ್ಯಾಂಡರ್‌ ಮತ್ತು ಅದರೊಳಗಡೆ ಅಳವಡಿಸಲಾಗಿದೆ. ಈ ಎರಡೂ ಸಾಧನಗಳನ್ನು ಎರಡು ಬೋಲ್ಟ್‌ಗಳ ಮೂಲಕ ಒಟ್ಟಗಿರಿಸಲಾಗಿದೆ. ಬೆಂಗಳೂರಿನಲ್ಲಿರುವ ಇಸ್ರೋ ಟೆಲಿಮಿಟ್ರಿ, ಟ್ರ್ಯಾಕಿಂಗ್‌ ಮತ್ತು ಕಮಾಂಡ್‌ ನೆಟ್‌ವರ್ಕ್‌ ಕೇಂದ್ರದ ವಿಜ್ಞಾನಿಯೊಬ್ಬರು ಚಂದ್ರಯಾನ-2 ವನ್ನು ನಿಯಂತ್ರಿಸುತ್ತಿದ್ದಾರೆ. 'ಆರ್ಬಿಟರ್ ಮತ್ತು ಲ್ಯಾಂಡರ್ ಅನ್ನು ಜೋಡಿಸಲು ಲೋಹದ ಸ್ಪ್ರಿಂಗ್‌ ಬಳಸಲಾಗಿದೆ. ಇದರ ಅರ್ಧ ಭಾಗ ಆರ್ಬಿಟರ್‌ನಲ್ಲೂ, ಇನ್ನರ್ಧ ಭಾಗ ಲ್ಯಾಂಡರ್‌ನಲ್ಲೂ ಇರುತ್ತದೆ. ಸ್ಪ್ರಿಂಗ್‌ಗಳನ್ನು ಎರಡು ಬೋಲ್ಟ್‌ಗಳಿಂದ ಬಂಧಿಸಲಾಗಿದೆ. ಈ ಎರಡೂ ಬೋಲ್ಟ್‌ಗಳನ್ನು ಕತ್ತರಿಸಿದಾಗ ಲ್ಯಾಂಡರ್‌ ಪ್ರತ್ಯೇಕಗೊಳ್ಳುತ್ತದೆ' ಎಂದು ವಿಜ್ಞಾನಿ ತಿಳಿಸಿದರು. ಕಮಾಂಡ್‌ ನೀಡಿದ ಬಳಿಕ 50 ಮಿಲಿ ಸೆಕೆಂಡ್‌ಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಲ್ಯಾಂಡರ್‌ ಪ್ರತ್ಯೇಕಗೊಳ್ಳಲಿದೆ. ಈ ಎರಡೂ ಕಾರ್ಯಾಚರಣೆಗಳು ಅತ್ಯಂತ ಮಹತ್ವದ್ದಾಗಿವೆ' ಎಂದು ವಿಜ್ಞಾನಿ ವಿವರಿಸಿದರು. ಬೇರ್ಪಡಿಸುವ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಚಂದ್ರನ ಮೇಲೆ ಇಳಿಯುವುದಕ್ಕೆ ಒಂದು ವಾರವಷ್ಟೇ ಬಾಕಿ ಉಳಿದಿರುತ್ತದೆ. ಸೆಪ್ಟೆಂಬರ್‌ 7ರಂದು ಬೆಳಗಿನ ಜಾವ 1:55ಕ್ಕೆ ಈ ಕಾರ್ಯಾಚರಣೆ ನಡೆಯುತ್ತದೆ. ಯಶಸ್ವೀ ಲ್ಯಾಂಡಿಂಗ್ ಆದರೆ, ಅಮೆರಿಕ, ರಷ್ಯಾ, ಚೀನಾದ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ ಭಾರತವಾಗಿರುತ್ತದೆ. ಬೇರ್ಪಡಿಸಿದ ನಂತರದ ಚಟುವಟಿಕೆ: ಸೆಪ್ಟೆಂಬರ್‌ 3ರಂದು, ಲ್ಯಾಂಡರ್‌ ಬೇರ್ಪಡಿಸಿದ ಒಂದು ದಿನದ ಬಳಿಕ ಬೆಂಗಳೂರಿನಲ್ಲಿರುವ ಮಿಷನ್ ಕಂಟ್ರೋಲ್ ಸೆಂಟರ್‌, 'ವಿಕ್ರಮ್‌'ನ 'ಆರೋಗ್ಯ ತಪಾಸಣೆ' ನಡೆಸಲಿದೆ. ಸೆಪ್ಟೆಂಬರ್‌ 4ರಂದು 6.5 ಸೆಕೆಂಡ್‌ಗಳ ಕಾಲ ವಿಕ್ರಮ್‌ ಅನ್ನು ಚಂದ್ರನ ಮೇಲೆ ಇಳಿಯಲು ಸನ್ನದ್ಧಗೊಳಿಸುವ ಕಾರ್ಯಾಚರಣೆ ನಡೆಯಲಿದೆ. ಲ್ಯಾಂಡರ್‌ 35 ಕಿ.ಮೀ x 97 ಕಿ.ಮೀ ಕಕ್ಷೆಯಲ್ಲಿದ್ದಾಗ ಮತ್ತೊಮ್ಮೆ ಎಲ್ಲಾ ಉಪಕರಣಗಳು ಸುಸ್ಥಿತಿಯಲ್ಲಿವೆಯೇ ಎಂದು ತಪಾಸಣೆ ನಡೆಸಲಾಗುತ್ತದೆ. ಸೆಪ್ಟೆಂಬರ್‌ 7ರಂದು 1:40 ಗಂಟೆಗೆ ನಿಯಂತ್ರಿತ ಇಳಿಯುವಿಕೆ ಆರಂಭವಾಗುತ್ತದೆ. 1:55ಕ್ಕೆ ಲ್ಯಾಂಡರ್‌ ಚಂದ್ರನ ನೆಲವನ್ನು ಸ್ಪರ್ಷಿಸಲಿದೆ. ನಂತರ ನಾಲ್ಕು ಗಂಟೆಗಳ ಬಳಿಕ ರೋವರ್‌ ಹೊರಬರಲಿದೆ' ಎಂದು ಶಿವನ್ ವಿವರಿಸಿದರು.


from India & World News in Kannada | VK Polls https://ift.tt/2ZJAwtw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...