ಹೊಸದಿಲ್ಲಿ: ಮುಂಬೈ ಮೇಲೆ ನಡೆದ ಉಗ್ರರ ದಾಳಿಯ ಕರಾಳ ನೆನಪು ಇನ್ನೂ ಹಸಿಯಾಗಿರುವಾಗಲೇ, ಇದೇ ಮಾದರಿಯಲ್ಲಿ ಮತ್ತೊಮ್ಮೆ ಭಾರತದೊಳಗೆ ನುಗ್ಗಲು ಭಯೋತ್ಪಾದಕರು ಹೊಂಚು ಹಾಕ್ತಿದ್ದಾರೆ ಅನ್ನೋ ಆಘಾತಕಾರಿ ಮಾಹಿತಿ ಬಯಲಾಗಿದೆ. ಭಾರತೀಯ ಗಡಿ ಭದ್ರತಾ ಪಡೆ ಹಾಗೂ ಭಾರತೀಯ ಕೋಸ್ಟ್ ಗಾರ್ಡ್ ಗೆ (ತಟ ರಕ್ಷಣಾ ಪಡೆ) ಬೇಹುಗಾರಿಕಾ ಪಡೆ ಮಾಹಿತಿ ರವಾನಿಸಿದೆ. ಕಛ್ ಕೊಲ್ಲಿ ಅಥವಾ ಸರ್ ಕ್ರೀಕ್ ಪ್ರದೇಶದಲ್ಲಿ ಭಾರತದೊಳಗೆ ನುಗ್ಗಲು ಮುಂದಾಗಿದ್ದಾರೆ. ಅದೂ ಕೂಡಾ ಸಣ್ಣ ದೋಣಿಗಳ ಮೂಲಕ ದೇಶದೊಳಗೆ ಪ್ರವೇಶ ಪಡೆಯಲಿದ್ದಾರೆ ಎಂದು ಬೇಹುಗಾರಿಕಾ ಪಡೆ ಎಚ್ಚರಿಕೆ ನೀಡಿದೆ. ಹೀಗಾಗಿ, ಕಛ್ ಹಾಗೂ ಸರ್ ಕ್ರೀಕ್ ವಲಯದಲ್ಲಿ ನೌಕಾಪಡೆ ಗಸ್ತು ತೀವ್ರಗೊಂಡಿದೆ. 2008 ನವೆಂಬರ್ 21ರಂದು ಪಾಕಿಸ್ತಾನದ ಕರಾಚಿ ಕಡಲ ತೀರದಿಂದ 10 ಮಂದಿ ಉಗ್ರರ ತಂಡ ಬೋಟ್ ಮೂಲಕ ಭಾರತದತ್ತ ಹೊರಟಿತ್ತು. ಅವರಿದ್ದ ದೋಣಿಯ ತುಂಬಾ ಶಸ್ತ್ರಾಸ್ತ್ರಗಳು ತಂಬಿದ್ದವು. ನವೆಂಬರ್ 23ರಂದು ಭಾರತದ ನೌಕಾ ವಲಯ ಪ್ರವೇಶಿಸಿದ್ದ ಉಗ್ರರು, ಭಾರತೀಯ ಮೀನುಗಾರರ ದೋಣಿಯೊಂದನ್ನು ವಶಪಡಿಸಿಕೊಂಡಿದ್ದರು. ದೋಣಿಯಲ್ಲಿದ್ದ ನಾಲ್ವರು ಬೆಸ್ತರನ್ನು ಕೊಂದು, ಭಾರತದ ತೀರದತ್ತ ದೋಣಿ ನಡೆಸುವಂತೆ ಅಂಬಿಗನಿಗೆ ಬೆದರಿಸಿದ್ದರು. ಬಳಿಕ ಅದೇ ದೋಣಿಯಲ್ಲಿ ಭಾರತವನ್ನು ಪ್ರವೇಶಿಸಿ, ಅತ್ಯಂತ ಕ್ರೂರವಾಗಿ ಅಂಬಿಗನನ್ನು ಕೊಂದು ಹಾಕಿದ್ದರು. ಈ ಮೂಲಕ ಕರಾಳ ಇತಿಹಾಸವೊಂದಕ್ಕೆ ನಾಂದಿ ಹಾಡಿದ್ದರು.
from India & World News in Kannada | VK Polls https://ift.tt/2zvscCZ