ಇಂಫಾಲ: ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ನಾವಿಂದು ಎದುರಿಸುತ್ತಿದ್ದೇವೆ. ಕಾಡು ನಾಶ ಎನ್ನುವುದು ಸರ್ವೇ ಸಾಮಾನ್ಯ ಸಮಸ್ಯೆಯಾಗಿ ಕಣ್ಣ ಮುಂದೆ ನಿಂತಿದೆ. ಇಂಥಹ ಹೊತ್ತಲ್ಲಿ ಇಂಫಾಲದ ವ್ಯಕ್ತಿಯೊಬ್ಬರು 300 ಎಕರೆಯಲ್ಲಿ ಕಾಡು ಬೆಳೆಸಿ ಮಾದರಿ ಕೆಲಸ ಮಾಡಿದ್ದಾರೆ. ಮೊಯ್ರಂಗ್‌ಥೆಮ್ ಲೊಯಾ ಪಶ್ಚಿಮ ಇಂಫಾಲದಲ್ಲಿರುವ ಉರಿಪೋಕ್ ಕೈದಮ್‌ಗೆ ಸೇರಿದವರು. ಅಪಾರ ಪ್ರೀತಿಯ ಇವರು ಸಣ್ಣವರಿದ್ದಾಗ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ಸೇನಾಪತಿ ಜಿಲ್ಲೆಯ ಕೌಬ್ರು ಎಂಬ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದರು. ಮುಂದೆ ಕಾಲೇಜು ಮುಗಿಸಿ 2000 ಇಸವಿಯಲ್ಲಿ ವಾಪಸಾದಾಗ ಅವರಿಗೆ ತಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ. ಹಚ್ಚ ಹಸುರಿನ ಗುಡ್ಡದ ಜಾಗದಲ್ಲಿ ಬೋಳು ಬೆಟ್ಟ ನಿಂತಿತ್ತು. ಅಲ್ಲಿನ ಕಾಡೆಲ್ಲ ನಾಶವಾಗಿತ್ತು. ಮತ್ತು ಕಾಡು ನಾಶದ ವಿರುದ್ಧ ಹೋರಾಡುತ್ತಿದ್ದ ಲೊಯಾ ಇದರಿಂದ ಮಮ್ಮಲ ಮರುಗಿ ಹೋದರು. ಆದರೆ ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ವಸುಂಧರೆಯನ್ನು ಮತ್ತೆ ಸಸ್ಯ ಶ್ಯಾಮಲೆಯಾಗಿಸುವ ಪಣತೊಟ್ಟರು. ಆದರೆ ಗಿಡ ನೆಡಲು ಜಾಗ ಬೇಕಾಗಿತ್ತು. ಹಾಗೆ ಹುಡುಕಾಡುತ್ತಾ ಹೋದವರಿಗೆ ಸಿಕ್ಕಿದ್ದು ಮರು ಲಂಗೋಲಿ ಎಂಬ ಬೆಟ್ಟ ಪ್ರದೇಶ. ಅವರು ಕಾಲಿಡುವ ಹೊತ್ತಿಗೆ ಈ ಬೆಟ್ಟವನ್ನು ಸ್ಥಳೀಯರು ಸುಟ್ಟು ಕರಕಲಾಗಿಸಿದ್ದರು. ಭತ್ತ ಬೆಳೆಯಲೆಂದು ಅರಣ್ಯಕ್ಕೆ ಬೆಂಕಿ ಇಟ್ಟವರು ಒಂದೇ ಒಂದು ಮರವನ್ನು ಬಿಟ್ಟಿರಲಿಲ್ಲ. ಈ ನೆಲದಲ್ಲೇ ಹಸಿರು ಬೆಳೆಸಬೇಕು ಎಂದು ಲೊಯಾ ಪಣ ತೊಟ್ಟರು. ಮೆಡಿಕಲ್ ಪ್ರತಿನಿಧಿ ಕೆಲಸ ಬಿಟ್ಟು ಒಂದಷ್ಟು ಬಟ್ಟೆಗಳು, ಆಹಾರ ಸಾಮಾಗ್ರಿಗಳನ್ನು ಚೀಲಕ್ಕೆ ತುಂಬಿಸಿ ಪುನ್‌ಶಿಲೋಕ್ ಪ್ರದೇಶಕ್ಕೆ ಹೊರಟು ನಿಂತರು. ಅಲ್ಲೇ ಸಣ್ಣ ಗುಡಿಸಲನ್ನು ನಿರ್ಮಿಸಿಕೊಂಡು ಮೊದಲಿಗೆ ಮೂರು ಜಾತಿಯ ಬೀಜಗಳನ್ನು ಕೆಲವು ಸ್ವಯಂ ಸೇವಕರು ಮತ್ತು ಗೆಳೆಯರ ಸಹಾಯದಿಂದ ಖರೀದಿಸಿದರು. ಮುಂದೆ ಬಿದಿರು, ಓಕ್, ಹಲಸು, ಸಾಗುವಾನಿ ಮೊದಲಾದ ಮರಗಳನ್ನು ನೆಡಲು ಆರಂಭಿಸಿದರು. “ಸಾಮಾನ್ಯವಾಗಿ ಅರಣ್ಯದೊಳಗಿನ ಯಾವುದೇ ಚಟುವಟಿಕೆಗಳನ್ನು ಅಕ್ರಮ ಎಂದು ಪರಿಗಣಿಸಲಾಗುತ್ತದೆ. ಆದರೆ ಲೊಯಾ ಕಾಡು ಬೆಳೆಸಲು ಸಹಾಯ ಮಾಡುತ್ತಿದ್ದರಿಂದ ನಾವಿದನ್ನು ಅಕ್ರಮ ಎಂದು ಪರಿಗಣಿಸಲಿಲ್ಲ,” ಎನ್ನುತ್ತಾರೆ ಇಲ್ಲಿನ ಪ್ರಾದೇಶಿಕ ಅಧಿಕಾರಿ ನಂದೈಬಮ್ ಮೊಬಿ ಸಿಂಗ್. 2003ರ ಹೊತ್ತಿಗೆ ತಮ್ಮ ಪ್ರಯತ್ನಕ್ಕೆ ಸಾಂಸ್ಥಿಕ ರೂಪ ನೀಡಿದ ಲೊಯಾ ಗೆಳೆಯರ ಜೊತೆ ಸೇರಿ ವೈಲ್ಡ್‌ಲೈಫ್ ಆಂಡ್ ಹ್ಯಾಬಿಟ್ಯಾಟ್ ಪ್ರೊಟೆಕ್ಷನ್ ಸೊಸೈಟಿ ಎಂಬ ಸಂಸ್ಥೆ ಹುಟ್ಟು ಹಾಕಿದರು. ಹೀಗೆ 2002ರಿಂದ ಆರಂಭವಾದ ಕೆಲಸದ ಫಲ 18 ವರ್ಷಗಳ ನಂತರ ಕಾಣಿಸುತ್ತಿದೆ. ಇಂದು 300 ಎಕರೆ ವಿಸ್ತೀರ್ಣದ ಜಾಗದಲ್ಲಿ ಪುನ್‌ಶಿಲೋಕ್ ಅರಣ್ಯ ತಲೆ ಎತ್ತಿ ನಿಂತಿದೆ. ಪುನ್‌ಶಿಲೋಕ್ ಎಂದರೆ ಜೀವನದ ವಸಂತಕಾಲ ಎಂದರ್ಥ. ಹೆಸರಿಗೆ ಅನ್ವರ್ಥವಾಗಿ ಈ ನೆಲಕ್ಕೆ ವಸಂತ ಕಾಲ ಆಗಮಿಸಿದೆ. ಇಂದು ಇಲ್ಲಿ 25ಕ್ಕೂ ಹೆಚ್ಚಿನ ಜಾತಿಯ ಬಿದಿರು ಮೆಳೆಗಳು, 250ಕ್ಕೂ ಹೆಚ್ಚು ವಿಧದ ಮರಗಳು ಇಲ್ಲಿ ಬೆಳೆದು ನಿಂತಿದೆ. ಹಲವು ಔಷಧೀಯ ಸಸ್ಯ ಸಂಕುಲವೂ ಇಲ್ಲಿದ್ದು, ಇವುಗಳ ಮಧ್ಯೆ ಹಕ್ಕಿಗಳು, ಹಾವುಗಳು, ಜಿಂಕೆ, ಕಾಡುಪಾಪು, ಕಾಡು ಬೆಕ್ಕು ಸೇರಿದಂತೆ ಹಲವು ಪ್ರಾಣಿಗಳು ತಮ್ಮ ನೆಲೆ ಕಂಡುಕೊಂಡಿವೆ. “ಇದೀಗ ಈ ಪ್ರದೇಶ ಹಲವರ ಕಣ್ಣು ಕುಕ್ಕುತ್ತಿದೆ. ಸ್ಥಳೀಯ ಪ್ರವಾಸಿಗರೂ ಸೇರಿದಂತೆ ವಿದೇಶಿಯರೆಲ್ಲಾ ಅರಣ್ಯದ ಸೌಂದರ್ಯ ಸವಿಯಲು ಭೇಟಿ ನೀಡುತ್ತಿದ್ದಾರೆ,” ಎಂದು ವಿವರಿಸುತ್ತಾರೆ ಲೊಯಾ. ಪುನ್‌ಶಿಲೋಕ್ ಲೊಯಾ ಪಾಲಿಗೆ ಕನಸಿನ ಯೋಜನೆ. ಹಾಗಂಥ ಅವರು ಇಲ್ಲಿಗೆ ನಿಂತಿಲ್ಲ. ಮತ್ತಷ್ಟು ಗಿಡ ನೆಟ್ಟು ಇನ್ನೊಂದಿಷ್ಟು ಅರಣ್ಯ ಸೃಷ್ಟಿಸುವ ಎಂದೂ ಮುಗಿಯದ ಗುರಿಯನ್ನು ಅವರು ಹಾಕಿಕೊಂಡಿದ್ದಾರೆ.
from India & World News in Kannada | VK Polls https://ift.tt/344jr11