ಹೊಸದಿಲ್ಲಿ: ವಾಹನ ಸವಾರರೇ ಎಚ್ಚರ... ಸೆ.1 ರಿಂದ ಬೇಕಾಬಿಟ್ಟಿ ವಾಹನ ಚಲಾಯಿಸಿದರೆ, ಟ್ರಾಫಿಕ್ ಫೈನ್ ಕಟ್ಟಲು ಸಾಲ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ರಸ್ತೆ ಸಂಚಾರ ನಿಯಮ ಉಲ್ಲಂಘನೆಗೆ ಭಾರಿ ಪ್ರಮಾಣದ ದಂಡದ ನಿಯಮ ಸೆ.1 ರಿಂದ ರಾಷ್ಟ್ರಾದ್ಯಂತ ಜಾರಿಗೊಳ್ಳಲಿದೆ. ಮೋಟಾರು ಕಾಯ್ದೆ ತಿದ್ದುಪಡಿ 2019 ಸಂಸತ್‌ನಲ್ಲಿ ಅಂಗೀಕಾರ ಪಡೆದುಕೊಳ್ಳಲಾಗಿದ್ದು, ನಿಯಮಗಳು ಇದೀಗ ಜಾರಿಗೊಳ್ಳಲಿದೆ. ಈ ಹಿಂದೆ ರಸ್ತೆ ಸುರಕ್ಷತೆ ನಿಯಮಗಳ ಉಲ್ಲಂಘನೆಗೆ ಇದ್ದ ದಂಡಗಳ ಪ್ರಮಾಣವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಿದಲ್ಲಿ, ಹೊಸ ನಿಯಮದ ಪ್ರಕಾರ 10 ಸಾವಿರ ರೂ. ತೆರಬೇಕಾಗುತ್ತದೆ. ಸೀಟು ಬೆಲ್ಟ್ ಹಾಕದೇ ಇರುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದು ಇತ್ಯಾದಿ ತಪ್ಪುಗಳಿಂದ ನಿಮ್ಮ ಇಡೀ ತಿಂಗಳಿನ ಬಜೆಟ್‌ಗೆ ಭಾರಿ ಹೊಡೆತ ಬೀಳಲಿದೆ. ಈ ಸಂಬಂಧ ಆ.28 ರಂದು ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಮೊದಲ ಬಾರಿ ತಪ್ಪೆಸಗಿ ಸಿಕ್ಕಿಬಿದ್ದಲ್ಲಿ, ಈ ಹಿಂದೆ 100ರೂ. ದಂಡ ವಿಧಿಸಲಾಗುತ್ತಿತ್ತು. ಹೊಸ ನಿಯಮದಲ್ಲಿ ಇದನ್ನು 500 ರೂ. ಗೆ ಹೆಚ್ಚಳ ಮಾಡಲಾಗಿದೆ. ಅಂತೆಯೇ ಎರಡನೇ ಬಾರಿ ನಿಯಮ ಉಲ್ಲಂಘನೆಗೆ ಈ ಹಿಂದೆ ಇದ್ದ 300 ರೂ.ವನ್ನು 1500 ರೂ. ಗೆ ಹೆಚ್ಚಳ ಮಾಡಲಾಗಿದೆ. ಅಂತೆಯೇ ರಸ್ತೆ ನಿಯಮಗಳನ್ನು ಉಲ್ಲಂಘನೆ ಎಂಬ ಹೊಸ ನಿಯಮವನ್ನೂ ಜಾರಿಗೊಳಿಸಲಾಗಿದ್ದು, 500 ರಿಂದ 1 ಸಾವಿರ ರೂ. ವರೆಗೆ ದಂಡ ಕಟ್ಟಬೇಕಾಗುತ್ತದೆ. ಅಪಾಯಕಾರಿ ವಾಹನ ಚಲಾವಣೆಗೆ ಆರು ತಿಂಗಳು ಅಥವಾ 1 ವರ್ಷ ಸೆರೆವಾಸ ಅಥವಾ 1 ರಿಂ 5 ಸಾವಿರ ರೂ. ವರೆಗೆ ದಂಡ (ಮೊದಲ ಬಾರಿ) ಕಟ್ಟಬೇಕಾಗುತ್ತದೆ. ಅಂತೆಯೇ ಎರಡನೇ ಬಾರಿಯ ನಿಯಮ ಉಲ್ಲಂಘಿಸಿದಲ್ಲ, 2 ವರ್ಷದ ವರೆಗೆ ಜೈಲುವಾಸ ಅಥವಾ 10 ಸಾವಿರ ರೂ. ದಂಡ ನಿಗದಿಮಾಡಲಾಗಿದೆ. ಅಂತೆಯೇ ಕುಡಿದ ವಾಹನ ಚಲಾವಣೆಗೆ ಭಾರಿ ಪ್ರಮಾಣದ ದಂಡ ನಿಗದಿಪಡಿಸಲಾಗಿದ್ದು, ಮೊದಲ ಬಾರಿ ಸಿಕ್ಕಿ ಬಿದ್ದರೆ, 10 ಸಾವಿರ ರೂ, 2 ಬಾರಿಗೆ 15 ಸಾವಿರ ರೂ. ದಂಡ ನಿಗದಿಪಡಿಸಲಾಗಿದೆ. ವಿಮೆ ರಹಿತ ವಾಹನ ಚಲಾವಣೆಗೆ 2 ಸಾವಿರ ರೂ ಅಥವಾ ಜೈಲು ವಾಸ, ಡ್ರೈವಿಂಗ್ ಲೈಸನ್ಸ್ ಇಲ್ಲದೇ ವಾಹನ ಚಲಾವಣೆ ಮಾಡಿದಲ್ಲಿ 5 ಸಾವಿರ ರೂ ದಂಡ ನಿಗದಿ ಮಾಡಲಾಗಿದೆ. ಈ ಹಿಂದೆ ಪರವಾನಗಿ ಇಲ್ಲದೇ ವಾಹನ ಚಲಾವಣೆ ಮಾಡಿದಲ್ಲಿ 500 ರೂ. ದಂಡ ವಿಧಿಸಲಾಗುತ್ತಿತ್ತು. ಇದೀಗ ಈ ನಿಯಮ ಉಲ್ಲಂಘನೆಯಾದರೆ ದಂಡದ ಪ್ರಮಾಣವನ್ನು 10 ಪಟ್ಟು ಏರಿಸಲಾಗಿದೆ.
from India & World News in Kannada | VK Polls https://ift.tt/2NK5wXV