ಕಿಂಗಸ್ಟನ್: ಆತಿಥೇಯ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಊಟದ ವಿರಾಮದ ಹೊತ್ತಿಗೆ ಭಾರತ ತಂಡವು 118 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿದೆ. 264/5 ಎಂಬಲ್ಲಿದ್ದ ದಿನದಾಟ ಮುಂದುವರಿಸಿದ ಭಾರತಕ್ಕೆ ಮೊದಲ ಎಸೆತದಲ್ಲೇ ರಿಷಬ್ ಪಂತ್ (27) ವಿಕೆಟ್ ನಷ್ಟವಾಯಿತು. ಪಂತ್ ವಿಕೆಟ್ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಪಾತ್ರವಾಯಿತು. ಬಳಿಕ ರವೀಂದ್ರ ಜಡೇಜಾ ಜತೆಗೂಡಿದ ತಂಡವನ್ನು ಮುನ್ನಡೆಸಿದರು. ಆದರೆ ಜಡೇಜಾ (16) ಅವರಿಗೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಇನ್ನೊಂದೆಡೆ ಕಲಾತ್ಮಕ ಬ್ಯಾಟಿಂಗ್ ಮುಂದುವರಿಸಿದ ವಿಹಾರಿ ಆಕರ್ಷಕ ಅರ್ಧಶತಕವನ್ನು ಬಾರಿಸಿದರು. ಇವರಿಗೆ ಇಶಾಂತ್ ಶರ್ಮಾ ಅವರಿಂದಲೂ ಉತ್ತಮ ಬೆಂಬಲ ದೊರಕಿತು. ಊಟದ ವಿರಾಮದ ಹೊತ್ತಿಗೆ ವಿಹಾರಿ 84* ಹಾಗೂ ಇಶಾಂತ್ 11* ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವಿಂಡೀಸ್ ಪರ ಜೇಸನ್ ಹೋಲ್ಡರ್ ನಾಲ್ಕು ಹಾಗೂ ರಖೀಮ್ ಕಾರ್ನ್ವಾಲ್ ಎರಡು ವಿಕೆಟ್ ಪಡೆದು ಮಿಂಚಿದರು. ಈ ಮೊದಲು ಮೊದಲ ದಿನದಾಟದಲ್ಲಿ ನಾಯಕ ವಿರಾಟ್ ಕೊಹ್ಲಿ (76) ಹಾಗೂ ಮಯಾಂಕ್ ಅಗರ್ವಾಲ್ (55) ಅರ್ಧಶತಕದ ಬೆಂಬಲದೊಂದಿಗೆ ಭಾರತವು ಐದು ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತ್ತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2LkEfsn