ತಿಪಟೂರು (ತುಮಕೂರು): ನಾಲೆಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ತಿಪಟೂರು ತಾಲೂಕಿನ ಬೆಳಗರಹಳ್ಳಿ ಬಳಿ ಮೃತದೇಹಗಳು ಪತ್ತೆಯಾಗಿವೆ. ಮೃತರು ಚನ್ನರಾಯಪಟ್ಟಣ ತಾಲೂಕಿನ ಮತ್ತಿಘಟ್ಟ ನಿವಾಸಿ ರಮೇಶ್ (19) ಮತ್ತು ಹಿರಿಸಾವೆ ಗ್ರಾಮದ ಸ್ಮಿತಾ (19) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಕಾಣೆಯಾಗಿರುವ ಬಗ್ಗೆ ನವೆಂಬರ್ 16ರಂದು ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚನ್ನರಾಯಪಟ್ಟಣ ಬಳಿ ಹೇಮಾವತಿ ದಂಡೆಯಲ್ಲಿ ಬೈಕ್ ಹಾಗೂ ಇಬ್ಬರ ಚಪ್ಪಲಿಗಳೂ ಸಿಕ್ಕಿದ್ದವು. ನವೆಂಬರ್ 19ರಂದು ಬೆಳಗ್ಗೆ ತಿಪಟೂರು ತಾಲೂಕಿನ ಬೆಳಗರಹಳ್ಳಿ ಬಳಿ ನಾಲೆಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಈ ಇಬ್ಬರೂ ಪ್ರೇಮಿಗಳು ವೇಲನ್ನು ಸೊಂಟಕ್ಕೆ ಸುತ್ತಿಕೊಂಡು ನೀರಿಗೆ ಬಿದ್ದಿದ್ದಾರೆ. ಶವಗಳು ನಾಲೆಯಲ್ಲಿ ತೇಲಿಕೊಂಡು ಬರುತ್ತಿದ್ದುದನ್ನು ಕಂಡ ಸ್ಥಳೀಯರು ನೊಣವಿನಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಅಸ್ವಾಭಾವಿಕ ಸಾವು ಎಂದು ದಾಖಲಿಸಿಕೊಂಡು ಹಿರೀಸಾವೆ ಪೊಲೀಸ್ ಠಾಣೆಗೆ ಮೃತದೇಹಗಳನ್ನು ಹಸ್ತಾಂತರಿಸಿದ್ದಾರೆ. ಈ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಪ್ರೇಮಿಗಳು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ತನಿಖೆ ಬಳಿಕ ಪ್ರಕರಣದ ಸತ್ಯಾಸತ್ಯತೆ ತಿಳಿಯಲಿದೆ.
from India & World News in Kannada | VK Polls https://ift.tt/36YJvg7