: ಸಮೀಪದ ವಸ್ತಾರೆ ಗ್ರಾಮದ ಹಿರೇಕೆರೆಯಲ್ಲಿ ಈಜಲು ಹೋದ ಐವರು ನೀರು ಪಾಲಾದ ದಾರುಣ ಘಟನೆ ಬುಧವಾರ ಮಧಾಹ್ನ ನಡೆದಿದೆ. ಆಲದಗುಡ್ಡೆ ಸಮೀಪದ ಹಂಚರವಳ್ಳಿ ಗ್ರಾಮದ ಒಂದೇ ಕುಟುಂಬದ ಮೂವರು ಯುವಕರು ಹಾಗೂ ವಸ್ತಾರೆ ಗ್ರಾಮದ ಇಬ್ಬರು ಸೇರಿ ಒಟ್ಟು ಐವರು ಯುವಕರು ದಾರುಣವಾಗಿ ಮೃತಪಟ್ಟಿದ್ದು, ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಒಟ್ಟು 7 ಜನ ಯುವಕರು ಕೆರೆಗೆ ಈಜಲು ತೆರಳಿದ್ದು, ಇದರಲ್ಲಿ 5 ಜನ ಪಾಲಾಗಿದ್ದಾರೆ. ಜತೆಗೆ ಇದ್ದ ಇಬ್ಬರು ಮನೆಗೆ ಬಂದು ವಿಷಯ ತಿಳಿಸಿದ್ದಾರೆ. ಕೃಷ್ಣಮೂರ್ತಿ ಮತ್ತು ಕುಸುಮಾ ದಂಪತಿಯ ಅವಳಿ ಮಕ್ಕಳಾದ ದಿಲೀಪ್(19), ದೀಪಕ್(19), ಅವರ ತಮ್ಮ ಸುದೀಪ್(17) ಹಾಗೂ ವಸ್ತಾರೆ ಗ್ರಾಮದ ಮಹೇಶ್ ಮತ್ತು ಇಂದ್ರ ಅವರ ಒಬ್ಬನೇ ಮಗ ಸಂದೀಪ್(17) ಹಾಗೂ ಮಂಜಯ್ಯ, ಮಣಿ ದಂಪತಿ ಪುತ್ರ ರಾಘವೇಂದ್ರ(25) ಮೃತಪಟ್ಟವರು. ರಾಘವೇಂದ್ರ ಅವರು ಕೂಲಿ ಕಾರ್ಮಿಕರಾಗಿದ್ದು, ಉಳಿದ ನಾಲ್ವರು ವ್ಯಾಸಂಗ ಮಾಡುತ್ತಿದ್ದರು. ಕೃಷ್ಣಮೂರ್ತಿ, ಕುಸುಮಾ ದಂಪತಿಗೆ ಇದ್ದ ಮೂವರೂ ಮಕ್ಕಳು ಮೃತಪಟ್ಟಿದ್ದಾರೆ. ವಸ್ತಾರೆ ಗ್ರಾಮದ ಮಹೇಶ್ ಅವರ ಮಗಳ ಮದುವೆ ಕಳೆದ ವಾರ ಚಿಕ್ಕಮಗಳೂರಿನಲ್ಲಿ ನಡೆದಿತ್ತು. ಮದುವೆ ಸಮಾರಂಭಕ್ಕೆ ವಧುವಿನ ಸಂಬಂಧಿಕರು ಆಲದಗುಡ್ಡೆ ಸಮೀಪದ ಹಂಚರವಳ್ಳಿ ಗ್ರಾಮದಿಂದ ಬಂದಿದ್ದು, ಮಂಗಳವಾರ ವಸ್ತಾರೆಯಲ್ಲಿ ಬೀಗರ ಊಟ ಇತ್ತು. ಮಂಗಳವಾರ ನವದಂಪತಿಯನ್ನು ಉಳಿಸಿಕೊಂಡು ಬುಧವಾರ ಬೆಳಗ್ಗೆ ಸಹೋದರರೆಲ್ಲ ಸೇರಿ ಸಂತಸದಿಂದ ಅಕ್ಕನನ್ನು ಕಳುಹಿಸಿಕೊಟ್ಟಿದ್ದರು. ನಂತರ ಯುವಕರು ಈಜಲು ಹೋಗಿದ್ದಾಗ ಈ ದುರಂತ ಸಂಭವಿಸಿದ್ದು, ಮದುವೆ ಮನೆಯಲ್ಲಿ ಸೂತಕ ಆವರಿಸಿದೆ. ಈ ಬಾರಿ ಸತತ ಮಳೆಯಿಂದ ತುಂಬಿ ತುಳುಕುತ್ತಿದ್ದು ಹೆಚ್ಚು ಆಳವಿದೆ. ಜತೆಗೆ ಕೆರೆಯಲ್ಲಿ ಜೊಂಡುಹುಲ್ಲು ಬೆಳೆದಿದೆ. ಈಜಾಡಲು ಹೋಗಿದ್ದ ಯುವಕರು ಆಳದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನ ಅಗ್ನಿಶಾಮಕ ದಳ ಸಿಬ್ಬಂದಿ ಕೆರೆಯಿಂದ ಮೃತ ದೇಹಗಳನ್ನು ಹೊರತೆಗೆದಿದ್ದು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರಿಗೆ ಕಳುಹಿಸಿಕೊಡಲಾಯಿತು. ಮಕ್ಕಳನ್ನು ಕಳೆದುಕೊಂಡ ಪೋಷಕರು ನೆಲಕ್ಕೆ ತಲೆ ಚಚ್ಚಿಕೊಂಡು ಅಳುತ್ತಿದ್ದದ್ದು ಸ್ಥಳದಲ್ಲಿ ನೆರೆದಿದ್ದವರು ಮಮ್ಮಲ ಮರುಗುವಂತೆ ಮಾಡಿತ್ತು. ಘಟನಾ ಸ್ಥಳದಲ್ಲಿಆಲ್ದೂರು ಠಾಣೆ ಪಿಎಸ್‌ಐ ಶಂಭುಲಿಂಗಯ್ಯ ಹಾಗೂ ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು. ಈ ಕೆರೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ದೇವರ ಕೆರೆ ಎಂದು ಕರೆಯಲಾಗುತ್ತದೆ. ಕೆರೆ ಸುಮಾರು 35 ಎಕರೆ ವಿಸ್ತೀರ್ಣ ಹೊಂದಿದ್ದು, 15 ರಿಂದ 30 ಅಡಿ ಅಳವಿದೆ. ಇಲ್ಲಿಯವರೆಗೆ ಈ ಕೆರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ, ದೇವರಕೆರೆ ಎಂಬ ನಂಬಿಕೆಯಿಂದ ಸ್ಥಳೀಯರು ಯಾರೂ ಸಹ ಈಜಲು ಹೋಗುವುದಿಲ್ಲ. ಆದರೆ, ಈ ಯುವಕರು ಈಜಲು ಹೋಗಿ ಮೃತಪಟ್ಟಿರುವುದು ದುರಾದೃಷ್ಟಕರ ಎಂದು ವಸ್ತಾರೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ದಣಿಗಾಗಿ ದಣಿವರಿಯದೆ ಓಡಿ ಬಂದ ನಾಯಿ ಮೃತಪಟ್ಟ ಸಂದೀಪ್ ತನ್ನ ಮನೆಯಲ್ಲಿ ಸಾಕಿದ್ದ ನಾಯಿ ಡ್ಯಾನಿ, ತನ್ನ ಮಾಲೀಕನಿಗಾಗಿ ಮಧ್ಯಾಹ್ನದಿಂದ ಕೆರೆಯ ಪಕ್ಕದಲ್ಲೇ ಸುಳಿದಾಡುತ್ತಿತ್ತು. ತನ್ನ ಪ್ರೀತಿಯ ಮಾಲೀಕನನ್ನು ಕಳೆದುಕೊಂಡು ಮೌನಕ್ಕೆ ಜಾರಿತ್ತು. ಮೃತ ದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಸಾಗಿಸುವ ವೇಳೆ ವಾಹನದ ಹಿಂದೆಯೇ ಓಡಿದ ಶ್ವಾನದ ಪ್ರೀತಿಗೆ ಸ್ಥಳೀಯರು ಮರುಗಿದರು.
from India & World News in Kannada | VK Polls https://ift.tt/2Jbh0Uv