ಬೆಂಗಳೂರು: ‘ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ...’ ಹೀಗೆ ಆರಂಭಗೊಳ್ಳುವ ನಮ್ಮ ದೇಶದ ಸಂವಿಧಾನದ ಪೀಠಿಕೆ ಈ ದೇಶದ ಇಡೀ ಚಿತ್ರಣವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುತ್ತದೆ. ಅಂದ ಹಾಗೆ ಇಂದು ನವೆಂಬರ್ 26. ಇಂದಿಗೆ ಸರಿಯಾಗಿ ಎಪ್ಪತ್ತೊಂದು ವರ್ಷಗಳ ಹಿಂದೆ, ಅಂದರೆ ನವೆಂಬರ್ 26, 1949ರಂದು ಭಾರತಕ್ಕೊಂದು ಅಧಿಕೃತವಾದ ಸಂವಿಧಾನ ದೊರಕಿದ ದಿನ. ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಂವಿಧಾನ ಕರಡು ರಚನಾ ಸಮಿತಿಯ 2 ವರ್ಷ 11 ತಿಂಗಳ ಕಾಲದ ನಿರಂತರ ಅಧ್ಯಯನ ಮತ್ತು ಪರಿಶ್ರಮದ ಬಳಿಕ ನವೆಂಬರ್ 25ರಂದು ಸಭಾಧ್ಯಕ್ಷ ಡಾ.ರಾಜೇಂದ್ರ ಪ್ರಸಾದ್ ಅವರಿಗೆ ಹಸ್ತಾಂತರಿಸಿದ್ದರು. ಅದರ ಮರುದಿನವೇ ಸಂಸತ್‌ನ ಎಲ್ಲಾ ಸದಸ್ಯರು ಇದನ್ನು ಸರ್ವಾನುಮತದಿಂದ ಒಪ್ಪಿ ಭಾರತದ ಸಂವಿಧಾನ ಎಂದು ಅಂಗೀಕರಿಸಿದರು. ಹೀಗಾಗಿ ಭಾರತದಲ್ಲಿ ಪ್ರತೀ ವರ್ಷ ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಇಡೀ ಜಗತ್ತಿನಲ್ಲೇ ಅತೀದೊಡ್ಡ ಸುದೀರ್ಘವಾದ ಲಿಖಿತ ಸಂವಿಧಾನ ಎಂಬ ಖ್ಯಾತಿ ಪಡೆದಿರುವ ಭಾರತದ ಸಂವಿಧಾನ ಸುಮಾರು 145000 ಪದಗಳನ್ನು ಹೊಂದಿದೆ. ಆಗಸ್ಟ್ 29,1947ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಸಂವಿಧಾನದ ಕರ್ತೃ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆ ಹಿನ್ನೆಲೆ 2015ರ ಅಕ್ಟೋಬರ್ 11ರಂದು ಈ ದಿನವನ್ನು ಸಂವಿಧಾನ ದಿನವೆಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಹೀಗಾಗಿ ಇಂದು ಸಂವಿಧಾನ ದಿನಾಚರಣೆ ಹಿನ್ನೆಲೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೆಲವೊಂದು ಸ್ಪೂರ್ತಿದಾಯಕ ಸಂದೇಶಗಳನ್ನು ಇಲ್ಲಿ ಕೊಡಲಾಗಿದೆ.
- ‘ಸಂವಿಧಾನ ಎಷ್ಟೇ ಉತ್ತಮವಾಗಿ ರಚಿತಗೊಂಡಿದ್ದರೂ, ಅದನ್ನು ಜಾರಿಗೆ ತರುವವರು ಕೆಟ್ಟವರಾಗಿದ್ದರೆ ಪ್ರಬಲ ಸಂವಿಧಾನ ಕೂಡ ದುರ್ಬಲ ಎನಿಸಿಕೊಳ್ಳುತ್ತದೆ. ಆದರೆ ಅದನ್ನು ಜಾರಿಗೆ ತರುವುದು ಒಳ್ಳೆಯವರ ಪಾಲಾದರೆ ದುರ್ಬಲ ಸಂವಿಧಾನವೂ ಉತ್ತಮ ಎನಿಸಿಕೊಳ್ಳುತ್ತದೆ’
- ‘ನಾವು ಪ್ರಜಾಪ್ರಭುತ್ವವನ್ನು ಕೃತಿಯಲ್ಲಿ ಉಳಿಸುವುದು ಅಷ್ಟೇ ಅಲ್ಲ, ಅದನ್ನು ವಾಸ್ತವ ರೂಪಕ್ಕೆ ತರಲು ಏನು ಮಾಡಬೇಕು? ನನ್ನ ತೀರ್ಪಿನ ಪ್ರಕಾರ, ನಾವು ಮೊದಲು ಮಾಡಬೇಕಾಗಿರೋದು ಸಾಮಾಜಿಕ ಮತ್ತು ಆರ್ಥಿಕ ಉದ್ದೇಶಗಳನ್ನು ಸಾಧಿಸುವ ಸಾಂವಿಧಾನಿಕ ವಿಧಾನಗಳನ್ನು ಹಿಡಿದಿಟ್ಟುಕೊಳ್ಳುವುದು.’
- ‘ಸಾಮಾಜಿಕ ಪ್ರಜಾಪ್ರಭುತ್ವದ ಅಡಿಯಲ್ಲಿ ರಾಜಕೀಯ ಪ್ರಜಾಪ್ರಭುತ್ವ ಬರದಿದ್ದರೆ ಅದು ಉಳಿಯುವುದಿಲ್ಲ. ಹಾಗಿದ್ದರೆ ಸಾಮಾಜಿಕ ಪ್ರಜಾಪ್ರಭುತ್ವ ಎಂದರೇನು? ಇದರರ್ಥ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಜೀವನದ ತತ್ವಗಳನ್ನಾಗಿ ಅಳವಡಿಸುವ ಜೀವನ ವಿಧಾನ’
- ‘ನಾನು ಸಮುದಾಯದ ಪ್ರಗತಿಯನ್ನು ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ಅಳೆಯುತ್ತೇನೆ’
- ‘ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಂತಹ ಅಂಗಗಳನ್ನು ರಾಜ್ಯಗಳಿಗೆ ಒದಗಿಸುತ್ತದೆ. ಆ ಅಂಗಗಳ ಕೆಲಸವು ಅವುಗಳನ್ನು ಅವಲಂಬಿಸಿರುವ ಜನರು ಮತ್ತು ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಮತ್ತು ರಾಜಕೀಯವನ್ನು ನಿರ್ವಹಿಸಲು ಸಾಧನಗಳಾಗಿ ಮಾರ್ಪಡುತ್ತದೆ.’
- ‘ಎಲ್ಲಿಯವರೆಗೆ ನೀವು ಸಾಮಾಜಿಕ ಸ್ವಾತಂತ್ರ್ಯದಿಂದ ವಂಚಿತರಾಗಿರುತ್ತೀರೋ, ಅಲ್ಲಿಯವರೆಗೆ ನೀವು ಕಾನೂನಿನಿಂದ ಯಾವುದೇ ಸ್ವಾತಂತ್ರ್ಯವನ್ನು ಪಡೆದರೂ ಅದರ ಪ್ರಯೋಜನ ಬರುವುದಿಲ್ಲ.’
- ‘ಪ್ರಜಾಪ್ರಭುತ್ವ ಹಾಗೂ ಸ್ವರಾಜ್ಯಗಳು ಬರೀ ಹೆಸರಿಗಷ್ಟೇ ಆಗದೆ ತಮ್ಮ ನೈಜ ಸ್ವಭಾವದೊಂದಿಗೆ ಮೂಡಬೇಕು. ಇವು ಸಮಾನತೆಯ ಅಡಿಪಾಯದ ಮೇಲೆ ನಿಂತಿರಬೇಕು. ಶಾಶ್ವತವಾಗಿ ಸ್ಥಿರಗೊಂಡ ಒಂದು ಆಳುವ ವರ್ಗದ ಅಸ್ಥಿತ್ವವೂ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ.’
- ‘ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮವನ್ನು ನಾನು ಇಷ್ಟಪಡುತ್ತೇನೆ’
- ‘ನೀವು ಹುಲಿ ಸಿಂಹಗಳಾಗಿ ಬದುಕಿರಿ, ಯಾಕೆಂದರೆ ಬಲಿಕೊಡುವುದು ಕುರಿಕೋಳಿಗಳನ್ನೇ ಹೊರತು ಹುಲಿಸಿಂಹಗಳನ್ನಲ್ಲ’
- ‘ನಾವು ಮೊದಲನೆಯದಾಗಿ ಮತ್ತು ಕೊನೆಯದಾಗಿ ಭಾರತೀಯರೇ ಆಗಿದ್ದೇವೆ’
from India & World News in Kannada | VK Polls https://ift.tt/3m861cT