ಬೆಂಗಳೂರು: ರಾಜ್ಯ ರಚನೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಹಾಗೂ ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವವರನ್ನೂ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಬೆಂಗಳೂರಿನ ಪರಿಸರವಾದಿ ಪ್ರಮೋದ್ ವೆಂಕಟೇಶಮೂರ್ತಿ ಸಲ್ಲಿಸಿದ್ದ ಪಿಐಎಲ್ ಆಲಿಸಿದ ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯಪೀಠ, ಕೆಲ ಕಾಲ ವಾದ ಆಲಿಸಿದ ಬಳಿಕ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಅರಣ್ಯ ಸಂರಕ್ಷಕರು, ರಾಜ್ಯ ವನ್ಯಜೀವಿ ಮಂಡಳಿಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೆ, ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿರುವವರನ್ನು ಪ್ರತಿವಾದಿಯನ್ನಾಗಿ ಮಾಡಬೇಕು. ಅದಕ್ಕೆ ಅರ್ಜಿಯಲ್ಲಿ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಸೂಚಿಸಿದ ನ್ಯಾಯಪೀಠ ಸರಕಾರಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿತು. ಅರ್ಜಿದಾರರ ಪರ ವಕೀಲೆ ಅನುಚೆಂಗಪ್ಪ, ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಸೆಕ್ಷನ್ 6(1) ಅಡಿಯಲ್ಲಿ ಸರಕಾರ ವನ್ಯಜೀವಿ ಮಂಡಳಿ ರಚನೆ ಮಾಡಿದೆ. ನಿಯಮದಂತೆ ಪರಿಸರವಾದಿಗಳು, ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರು ಮತ್ತು ಪರಿಶಿಷ್ಟ ಪಂಗಡದವರು ಇಲ್ಲ ಎಂದು ಆರೋಪಿಸಿದರು. ದಿನೇಶ್ ಸಿಂಗ್ವಿ ಅವರನ್ನು ಸರಕಾರ 2020ರ ಜ.18ರಂದು ಮಂಡಳಿ ಸದಸ್ಯರನ್ನಾಗಿ ನೇಮಿಸಿದೆ. ಅವರು ಗಣಿ ಮಾಲೀಕರಾಗಿದ್ದು, ಬೇಲೇಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ. ಅ.16ರಂದು ಹೊಸದಾಗಿ 10 ಮಂದಿ ಸದಸ್ಯರನ್ನು ನೇಮಕ ಮಾಡಿಕೊಂಡಿದ್ದು, ಅವರಲ್ಲಿ ಬಿ.ಚೇತನ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಿಜೆಪಿ ಕಾರ್ಯಕರ್ತ. ಡಾ.ಎ.ಆರ್. ಸೋಮಶೇಖರ್ ವೈದ್ಯರು, ಅಲೋಕ್ ವಿಶ್ವನಾಥ್, ಶಾಸಕ ಎಸ್.ಆರ್. ವಿಶ್ವನಾಥ್ ಪುತ್ರ. ಜೆ.ಎಸ್. ನವೀನ್, ಕಂದಾಯ ಸಚಿವ ಆರ್. ಆಶೋಕ್ ಸಂಬಂಧಿ ಹಾಗೂ ಇಬ್ಬರು ಪತ್ರಕರ್ತರು ಮತ್ತಿತರರು ಇದ್ದು, ಅವರ್ಯಾರಿಗೂ ವನ್ಯಜೀವಿಗಳ ಬಗ್ಗೆ ಜ್ಞಾನವಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
from India & World News in Kannada | VK Polls https://ift.tt/2V6rRS7