ಶಿಶು ಮಾರಾಟ ಜಾಲಕ್ಕೆ ಸರ್ಕಾರಿ ವೈದ್ಯನೇ ಕಿಂಗ್‌ ಪಿನ್..! ಗರ್ಭಿಣಿ ಆಗದವರೂ ತಾಯಿ ಆಗಬಹುದು..!

ಆರಗ ರವಿ ಚಿಕ್ಕಮಗಳೂರು: ಕೊಪ್ಪದ ಎಂಎಸ್‌ಡಿಎಂ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರೇ ನವಜಾತ ಶಿಶುಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣ ಬಯಲಾಗಿದೆ. ಮಗು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಸಕ್ರಿಯವಾಗಿದ್ದು, ಇದಕ್ಕೆ ವೈದ್ಯರೇ ಸಾಥ್‌ ನೀಡುತ್ತಿರುವುದು ಆತಂಕದ ಬೆಳವಣಿಗೆ. ರಾಜಕೀಯ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿ ಹಾಕಲು ಸಾಕಷ್ಟು ಪ್ರಯತ್ನವೂ ನಡೆದಿದೆ. ಆದರೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಪಟ್ಟು ಸಡಿಲಿಸದ ಕಾರಣ, ಕೊಪ್ಪ ಪೊಲೀಸ್‌ ಠಾಣೆಯಲ್ಲಿ ಸೋಮವಾರ ರಾತ್ರಿ ಎಫ್‌ಐಆರ್‌ ದಾಖಲಿಸಲಾಗಿದೆ. ಕೊಪ್ಪ ತಾಲೂಕು ಆಸ್ಪತ್ರೆಯ ಹೆರಿಗೆ ತಜ್ಞ ಡಾ.ಬಾಲಕೃಷ್ಣ ವಿರುದ್ಧ ಮಗುವನ್ನು ಮಾರಾಟ ಮಾಡಿದ ನೇರ ಆರೋಪವಿದ್ದು, ಈ ಹಿಂದೆಯೂ ಆಸ್ಪತ್ರೆಯಲ್ಲಿ ಮಕ್ಕಳ ಮಾರಾಟ ಪ್ರಕರಣಗಳು ನಡೆದಿವೆ ಎನ್ನಲಾಗುತ್ತಿದೆ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ವೈದ್ಯರಿಂದಲೇ ಡೀಲ್‌! ತೀರ್ಥಹಳ್ಳಿಯ ಯುವತಿಯೊಬ್ಬಳು ಮದುವೆಗೆ ಮುನ್ನ ಗರ್ಭಿಣಿಯಾಗಿದ್ದು, ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ 2020 ಮಾರ್ಚ್ 14 ರಂದು ಹೆರಿಗೆಯಾಗಿತ್ತು. ಹೆರಿಗೆ ಮಾಡಿಸಿದ ಡಾ.ಬಾಲಕೃಷ್ಣ, 'ನಿಮಗೆ ಮಗುವನ್ನು ಸಾಕಲು ಸಾಧ್ಯವಿಲ್ಲ. ಮಗುವನ್ನು ಇಲ್ಲೇ ಕೊಟ್ಟು ಹೋಗಿ. ಇಲ್ಲದಿದ್ದರೆ ಮದುವೆಯಾಗದೆ ಗರ್ಭಿಣಿಯಾಗಿದ್ದಕ್ಕೆ ಪೊಲೀಸ್‌ ಕಂಪ್ಲೆಂಟ್‌ ನೀಡುತ್ತೇನೆ. ಅಲ್ಲದೆ ಡಿಸ್ಚಾರ್ಜ್ ಮಾಡುವುದಿಲ್ಲ' ಎಂದು ಹೆದರಿಸಿದ್ದರು. ವೈದ್ಯರು ಹೇಳಿದ ವ್ಯಕ್ತಿಗಳಿಗೆ ಮಗುವನ್ನು ನೀಡಿದ್ದು, ಯುವತಿಗೆ 5 ಸಾವಿರ ರೂ. ಹಾಗೂ ಒಂದು ಚೂಡಿದಾರ್‌ ಕೊಡಿಸಲಾಗಿತ್ತು. ಮಗುವನ್ನು ಪಡೆದವರು ತನ್ನ ಕಣ್ಣೆದುರೇ ವೈದ್ಯರಿಗೆ 50 ಸಾವಿರ ರೂ. ಕೊಟ್ಟಿದ್ದಾಗಿ ಆಕೆಯ ತಾಯಿ ನ.29ರಂದು ತಾಲೂಕು ಆರೋಗ್ಯಾಧಿಕಾರಿ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗೆ ಹೇಳಿಕೆ ನೀಡಿದ್ದಾಳೆ. ಮಗುವಿಗೆ ಜನ್ಮ ನೀಡಿದ ಯುವತಿ ಮಗುವನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗಿ ಶಿವಮೊಗ್ಗದ ಎನ್‌ಜಿಒದಲ್ಲಿದ್ದಾಳೆ. ಯುವತಿಯ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸಿದಾಗ ಆ ಯುವತಿಗೆ ಹೆರಿಗೆಯಾದ ದಿನ ಕೇಸ್‌ ಶೀಟ್‌ನಲ್ಲಿ'ಹೆರಿಗೆಯಾಗಿಲ್ಲ' ಎಂದು ನಮೂದಿಸಲಾಗಿದೆ. ಅದೇ ಕೇಸ್‌ ಶೀಟ್‌ ನಂಬರ್‌ನಲ್ಲಿ ಇನ್ನೊಬ್ಬರ ಹೆಸರು, ವಿಳಾಸ ನಮೂದಿಸಿ ಅವರಿಗೆ ಹೆರಿಗೆಯಾದಂತೆ ಹೆರಿಗೆ ರಿಜಿಸ್ಟರ್‌ನಲ್ಲಿ ದಾಖಲು ಮಾಡಿರುವುದು ಕಂಡುಬಂದಿದೆ. ವಾಸ್ತವದಲ್ಲಿಇನ್ನೊಬ್ಬಳು ಮಹಿಳೆ (ಮಗುವನ್ನು ಖರೀದಿಸಿದ ಮಹಿಳೆ ಪ್ರೇಮಲತ) ಗರ್ಭಿಣಿಯೇ ಆಗಿರಲಿಲ್ಲ! ತಾಯಿ ಕಾರ್ಡ್‌, ನೋಂದಣಿಯೂ ಇರಲಿಲ್ಲ. ಶೃಂಗೇರಿಯಲ್ಲಿ ವಾಸವಿರುವ ತಮಿಳು ಮೂಲದ ಮಹಿಳೆ ಪ್ರೇಮಲತ ಮತ್ತು ಮಾರಾಟವಾಗಿದ್ದ ಮಗುವನ್ನು ವಶಕ್ಕೆ ಪಡೆಯಲಾಗಿದೆ. ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಮಕ್ಕಳನ್ನು ಮಾರಾಟ ಮಾಡಿದ ಪ್ರಕರಣ ವರದಿಯಾಗಿವೆ. ಎಫ್‌ಐಆರ್‌ಗೆ ಸೂಚನೆ ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ಮಗು ಮಾರಾಟ ಮಾಡಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸೂಚಿಸಿದ್ದು, ಮಗುವನ್ನು ವಶಕ್ಕೆ ಪಡೆಯಲಾಗಿದೆ. ಮಗು ಮಾರಾಟದಂತಹ ಪ್ರಕರಣಗಳು ವರದಿಯಾದಾಗ ಪೊಲೀಸ್‌ ಇಲಾಖೆ ವಿಳಂಬ ಮಾಡದೆ ಪ್ರಕರಣ ದಾಖಲಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಿ. ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ. ಆಶಾ ಜವಾಬ್ದಾರಿ ಆಶಾ ಕಾರ‍್ಯಕರ್ತೆಯರು ಮನೆ ಭೇಟಿ ಸಂದರ್ಭ ಆ ಮನೆಯಲ್ಲಿರುವ ಗರ್ಭಿಣಿಯರು, ಬಾಣಂತಿಯರು, ಶಿಶುಗಳ ಮಾಹಿತಿ ಸಂಗ್ರಹಿಸಬೇಕು. ಆದರೆ, ತೀರ್ಥಹಳ್ಳಿಯ ಯುವತಿ ಗರ್ಭಿಣಿಯಾಗಿರುವ ಮಾಹಿತಿಯನ್ನಾಗಲಿ, ಶೃಂಗೇರಿಯ ಮಹಿಳೆ ಗರ್ಭಿಣಿಯೇ ಆಗದೆ ಮಗುವನ್ನು ಸಾಕುತ್ತಿರುವ ಮಾಹಿತಿಯನ್ನಾಗಲಿ ಅಲ್ಲಿನ ಅಶಾ ಮತ್ತು ಅಂಗನವಾಡಿ ಕಾರ‍್ಯಕರ್ತೆಯರು ದಾಖಲಿಸಿಲ್ಲ. ಶೃಂಗೇರಿಯ ತಮಿಳು ಮೂಲದ ಕುಟುಂಬದಲ್ಲಿ ಕಳೆದ 9 ತಿಂಗಳಿಂದ ಈ ಮಗುವಿದ್ದರೂ ಮಗುವಿನ ಮಾರಾಟದ ಬಗ್ಗೆ ಎಲ್ಲಿಯೂ ದೂರು ದಾಖಲಾಗಿರಲಿಲ್ಲ. ವೈದ್ಯರ ವಿರುದ್ಧ ಎಫ್‌ಐಆರ್‌ ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ ಪೊಲೀಸ್‌ ಠಾಣೆಯಲ್ಲಿ ಡಾ. ಜಿ. ಎಸ್‌. ಬಾಲಕೃಷ್ಣ, ಸ್ಟ್ಯಾಫ್‌ ನರ್ಸ್‌ಗಳಾದ ಶೋಭಾ, ರೇಷ್ಮಾ, ಮಗು ಖರೀದಿಸಿದ್ದ ಪ್ರೇಮಲತ ವಿರುದ್ಧ ಕಲಂ 465, 466, 506, ಆರ್‌/ಡಬ್ಲ್ಯು 34ಐಪಿಸಿ, ಜೆಜೆ ಕಾಯಿದೆ-2015ರ ಕಲಂ 80, 81, 87ರಡಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಾನವಿ ದೂರು ದಾಖಲಿಸಿದ್ದಾರೆ.


from India & World News in Kannada | VK Polls https://ift.tt/37goU72

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...