ಬೆಂಗಳೂರು: ಮುಂದಿನ ವರ್ಷದ ಸಂಕ್ರಾಂತಿ ಬಳಿಕ ಉತ್ಪಾದಕರಿಗೆ ಪ್ರತಿ ಲೀ.ಗೆ ಎರಡು ರೂ. ಹೆಚ್ಚುವರಿ ಪ್ರೋತ್ಸಾಹಧನ ವಿತರಿಸಲು ಬೆಂಗಳೂರು ಹಾಲು ಒಕ್ಕೂಟ(ಬಮೂಲ್) ಚಿಂತನೆ ನಡೆಸಿದೆ. ಕೆಲ ತಿಂಗಳ ಹಿಂದೆ ಪ್ರತಿ ಲೀ.ಗೆ 2 ರೂ. ದರ ಕಡಿತ ಮಾಡುವ ನಿರ್ಧಾರ ಕೈಗೊಂಡಿತ್ತು. ಈಗ ಮತ್ತೆ ಆ ಎರಡು ರೂ. ಹಣವನ್ನು ರೈತರಿಗೆ ವಿತರಿಸಲಾಗುತ್ತದೆ. ಈ ಹಣ ಮುಂದಿನ ಜನವರಿ ನಂತರವೇ ಅಧಿಕೃತವಾಗಿ ವಿತರಿಸುವ ಸಾಧ್ಯತೆ ಇದೆ. ಪ್ರತಿ ವರ್ಷ ಬೇಸಿಗೆ ವೇಳೆ ಹಾಲು ಸಂಗ್ರಹ ಇಳಿಕೆಯಾದಾಗ ಹೈನುಗಾರರಿಗೆ ಪ್ರತಿ ಲೀ.ಗೆ 2 ರೂ. ನೀಡಲಾಗುತ್ತದೆ. ಮುಂಗಾರಿನ ಬಳಿಕ ಹೆಚ್ಚಿನ ಹಾಲು ಸಂಗ್ರಹವಾದಲ್ಲಿ ಆ 2 ರೂ. ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಈ ಪದ್ಧತಿ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಪ್ರಸ್ತುತ ಬಮೂಲ್ ತನ್ನ ಸದಸ್ಯರಿಗೆ ಪ್ರತಿ ಲೀ.ಗೆ ಶೇ. 3.5 ಕೊಬ್ಬಿನಾಂಶವಿರುವ ಹಾಲಿಗೆ 24 ರೂ. ಹಾಗೂ ಶೇ. 4.2ರಷ್ಟು ಕೊಬ್ಬಿನಾಂಶವುಳ್ಳ ಹಾಲಿಗೆ 25.50 ರೂ. ದರದಂತೆ ಹಣ ಪಾವತಿಸುತ್ತಿದೆ. ಈ ಕುರಿತು 'ವಿಕ'ಗೆ ಪ್ರತಿಕ್ರಿಯಿಸಿರುವ ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ''ಕೊರೊನಾದಿಂದಾಗಿ ಸಂಸ್ಥೆ ನಷ್ಟದತ್ತ ಮುಖ ಮಾಡಿದ್ದು, ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಹಾಲು ಉತ್ಪಾದಕರ ಹಿತಾಸಕ್ತಿ ರಕ್ಷಣೆಗೆ ಸಂಸ್ಥೆ ಬದ್ಧವಾಗಿದ್ದು, ಮುಂದಿನ ಜನವರಿ ನಂತರ ಪ್ರತಿ ಲೀ.ಗೆ 2 ರೂ. ಪ್ರೋತ್ಸಾಹಧನ ವಿತರಿಸುವ ಚಿಂತನೆ ಇದೆ. ಈ ಪ್ರಸ್ತಾಪವನ್ನು ಒಕ್ಕೂಟದ ಮಂಡಳಿ ಸಭೆಯಲ್ಲಿಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು,'' ಎಂದರು.
from India & World News in Kannada | VK Polls https://ift.tt/3o45lWz