ಬೆಂಗಳೂರು: ಯೆಲ್ಲೋ ಎಕ್ಸ್‌ಪ್ರೆಸ್ ಲಾಜಿಸ್ಟಿಕ್ಸ್‌ನ 60 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ 180 ಕಾರುಗಳು ಮತ್ತು 15 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರಕಾರ ಆದೇಶಿಸಿದೆ. ಹೂಡಿಕೆದಾರರು 2.5 ಲಕ್ಷ ರೂ. ಕಟ್ಟಿದರೆ ಆ ಹಣದಲ್ಲಿ ಹೂಡಿಕೆದಾರರ ಹೆಸರಿನಲ್ಲೇ ಒಂದು ಕಾರು ಖರೀದಿಸಲಾಗುತ್ತದೆ. ನಂತರ ಅದೇ ಕಾರನ್ನು ಕಂಪನಿಗಳಿಗೆ ಅಟ್ಯಾಚ್ ಮಾಡಲಾಗುವುದು. ಇದರಿಂದ ತಿಂಗಳಿಗೆ 10 ಸಾವಿರ ರೂ.ಗಳಿಂದ 25 ಸಾವಿರ ರೂ. ಗಳಿಸಬಹುದು ಮತ್ತು ಕಾರು ಕೂಡ ಹೂಡಿಕೆದಾರರಿಗೆ ಸಿಗುತ್ತದೆ ಎಂದು ಕಂಪನಿಯ ಪ್ರತಿನಿಧಿಗಳು ಭರವಸೆ ನೀಡಿದ್ದರು. ಇದನ್ನು ನಂಬಿ ಸುಮಾರು 2 ಸಾವಿರ ಜನ 60 ಕೋಟಿ ರೂ.ವರೆಗೆ ಹೂಡಿಕೆ ಮಾಡಿದ್ದಾರೆ. 2019ರಲ್ಲಿ ಯೆಲ್ಲೋ ಎಕ್ಸ್‌ಪ್ರೆಸ್ ಕಂಪನಿಯ ಸ್ಕೀಂ ಕುರಿತು ಸಾರ್ವಜನಿಕರ ಮಾಹಿತಿ ಹಿನ್ನೆಲೆಯಲ್ಲಿ ಅನುಮಾನಗೊಂಡ ಸರಕಾರ ವಿಚಾರಣೆ ನಡೆಸಿದಾಗ, ಫೋಂಜಿ ಸ್ಕೀಂ ಎನ್ನುವುದು ಗೊತ್ತಾಗಿದೆ. ಕೇವಲ 63 ಕಾರುಗಳನ್ನು ಹೂಡಿಕೆದಾರರ ಹೆಸರಿಗೆ ನೋಂದಾಯಿಸಿ, ಉಳಿದ 240 ಕಾರುಗಳನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದರು. ಈ ಸಂಬಂಧ ಸಿಐಡಿ ತನಿಖೆ ನಡೆಸುತ್ತಿದೆ. ಕಾರು ಮತ್ತು ಬ್ಯಾಂಕ್ ಖಾತೆಯಲ್ಲಿನ ಹಣ ಸೇರಿ ಕೇವಲ 9 ಕೋಟಿ ರೂ. ಸಿಕ್ಕಿದೆ. ವಂಚನೆ ಮೊತ್ತ ಸುಮಾರು 60 ಕೋಟಿ ರೂ. ಇದೆ. ಅಂದರೆ ಹೂಡಿಕೆದಾರರಿಗೆ ಅವರ ಹೂಡಿಕೆ ಮೇಲೆ ಸಿಗುವ ಹಣ ಸುಮಾರು ಶೇ.15ರಷ್ಟು ಮಾತ್ರ. ವಿಶೇಷ ನ್ಯಾಯಾಲಯದಿಂದ ವಾಹನಗಳ ಹರಾಜಿಗೆ ಅನುಮತಿ ಪಡೆದು, ಹರಾಜು ಪ್ರಕ್ರಿಯೆ ನಡೆದ ಬಳಿಕ ಹಣ ವಿತರಣೆಯಾಗಲಿದೆ.
from India & World News in Kannada | VK Polls https://ift.tt/3m9FDiT