ಎಂ.ಪ್ರಶಾಂತ್ ಬೆಂಗಳೂರು ಗ್ರಾಮಾಂತರ: ಮಾಸಾಶನಕ್ಕಾಗಿ ಅರ್ಜಿ ಹಿಡಿದು ನಾಡ ಕಚೇರಿಗೆ ನಿತ್ಯವೂ ಅಲೆದಾಡಬೇಕಿಲ್ಲ, ಅಧಿಕಾರಿಗಳಿಗೆ ಕಾದು ಕಾದು ಬೇಸತ್ತು ವಾಪಸ್ ಹಿಂದಿರುಗಬೇಕಿಲ್ಲ. ಮಧ್ಯವರ್ತಿಗಳೊಂದಿಗೆ ಗೋಳಾಡಿ ಹಣ ಕಳೆದುಕೊಳ್ಳಬೇಕಿಲ್ಲ. ನೀವು ಮಾಸಾಶನಕ್ಕೆ ಅರ್ಹರಾಗಿದ್ದರೆ ನಿಮ್ಮ ಮನೆ ಬಾಗಿಲಿಗೆ ಅಧಿಕಾರಿಗಳೇ ಖುದ್ದಾಗಿ ಬಂದು ಮಾಸಾಶನಕ್ಕೆ ಆಯ್ಕೆಯಾಗಿರುವ ಪತ್ರ ತಲುಪಿಸುತ್ತಾರೆ. ಹೌದು, ಇಂತಹದೊಂದು ಪ್ರಾಯೋಗಿಕ ಕಾರ್ಯಕ್ರಮ ರಾಜ್ಯದಲ್ಲಿ ನಡೆಯುತ್ತಿದ್ದು, ಈಗಾಗಲೇ ಉಡುಪಿ ಹಾಗೂ ಬೆಳಗಾವಿಯಲ್ಲಿ ಇದು ಯಶಸ್ವಿಯಾಗಿರುವ ಕಾರಣ ರಾಜ್ಯದ ಬೇರೆ ಜಿಲ್ಲೆಗಳಲ್ಲೂ ಇದನ್ನು ಜಾರಿಗೊಳಿಸಲಾಗಿದೆ. ಅಧಿಕಾರಿಗಳ ನೂರೆಂಟು ಪ್ರಶ್ನೆಗೆ ಉತ್ತರ ಕೊಡಬೇಕಿಲ್ಲ, ಹಣ ವ್ಯಯ ಮಾಡಿಕೊಂಡು ನಿತ್ಯವೂ ಓಡಾಡಿ ಸಂಕಟಪಡಬೇಕಿಲ್ಲ. ಸಾಲಾಗಿ ನಿಂತು ಬೇಸತ್ತು ಕೆಲಸವಾಗಲಿಲ್ಲವೆಂದು ಬರಬೇಕಿಲ್ಲ. ವಿವಿಧ ಯೋಜನೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಮಾಸಾಶನಕ್ಕೆ ಬೋಗಸ್ ದಾಖಲೆ ಸಲ್ಲಿಸಿ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾದ ಕಾರಣ ಎಚ್ಚೆತ್ತ ಕೇಂದ್ರ ಹಾಗೂ ರಾಜ್ಯ ಸರಕಾರ ಇಂತಹದೊಂದು ವಿನೂತನ ಯೋಜನೆ ಮೂಲಕ ಅಕ್ರಮ ಪಿಂಚಣಿಗೆ ಕಡಿವಾಣ ಹಾಕಲು ಕಂದಾಯ ಇಲಾಖೆ ಹೊಸ ಪ್ಲಾನ್ ಮಾಡಿ ಈ ಯೋಜನೆ ಜಾರಿಗೆ ತಂದಿದೆ. ಶೀಘ್ರವೇ ಇದಕ್ಕೆ ಚಾಲನೆಯೂ ದೊರೆಯಲಿದೆ. ಏನ್ ಯೋಜನೆ? ಕಂದಾಯ ಇಲಾಖೆ ಈಗಾಗಲೇ ಪಡಿತರ ಚೀಟಿಗಳಿಗೆ ಪ್ರತಿ ಕುಟುಂಬದ ಆಧಾರ್ ಸಂಖ್ಯೆಯನ್ನು ತಮ್ಮ ಡೇಟಾಬೇಸ್‌ನಲ್ಲಿ ಆಳವಡಿಸಿಕೊಂಡಿದ್ದು ಕುಟುಂಬಸ್ಥರು ಸಲ್ಲಿಸಿರುವ ಪ್ರತಿಯೊಬ್ಬರ ಆಧಾರ್ ಸಂಖ್ಯೆಯಲ್ಲಿರುವ ಜನ್ಮ ದಿನಾಂಕ ಗಮನಿಸಲಿದೆ. ಪಿಂಚಣಿಗೆ ಅರ್ಹತೆಯ ವಯಸ್ಸು ಹೊಂದುತ್ತಿದ್ದಂತೆ ಕಂದಾಯ ಇಲಾಖೆಯ ಅಧಿಕಾರಿಗಳೇ ತಮ್ಮಲ್ಲಿರುವ ಅವರ ಸಂಪೂರ್ಣ ಮಾಹಿತಿ ಪಡೆದು ಅರ್ಹತೆ ಹೊಂದಿದ ವ್ಯಕ್ತಿಯ ಮನೆಗೆ ಪತ್ರ ಕಳುಹಿಸಿ ನೀವು ಪಿಂಚಣಿಗೆ ಸೆಲೆಕ್ಟ್ ಆಗಿದ್ದೀರಿ. ಬ್ಯಾಂಕ್ ಖಾತೆ ಸಂಖ್ಯೆ, ಭಾವಚಿತ್ರ ತರಿಸಿಕೊಂಡು ಪರಿಶೀಲಿಸಿ ಅವರಿಗೆ ಹೊಂದುವ ಅರ್ಹತೆಯ ಪಿಂಚಣಿ ಮಂಜೂರು ಮಾಡಲಿದೆ. ಬೋಗಸ್‌ಗೆ ಕಡಿವಾಣ ಪಿಂಚಣಿ ಮಾಡಿಸಿಕೊಡ್ತೀನಿ ಅಂತ ಆನೇಕ ಕಡೆ ಮಧ್ಯವರ್ತಿಗಳು ವಯಸ್ಸಾದವರಿಂದ ಹಣ ಪೀಕಿ ವಂಚಿಸಿರುವುದುಂಟು. ನೇರವಾಗಿ ಅರ್ಹರು ಅಧಿಕಾರಿಗಳನ್ನು ಸಂಪರ್ಕಿಸಲು ಹತ್ತಾರು ಬಾರಿ ಕಚೇರಿಯತ್ತ ಅಲೆಯಬೇಕು. ಅಧಿಕಾರಿಗಳು ಸಿಕ್ಕರೂ ಚೆಕ್ ಲಿಸ್ಟ್ ಇತ್ಯಾದಿ ಪ್ರೊಸಸ್ ಫಲಾನುಭವಿಯನ್ನು ಕಾಯಿಸುವಂತೆ ಮಾಡುತ್ತಿದ್ದು ಇನ್ಮುಂದೆ ಇದಕ್ಕೆಲ್ಲ ಕಡಿವಾಣ ಬೀಳಲಿದೆ. ಎರಡು ಜಿಲ್ಲೆಗಳಲ್ಲಿ ಜಾರಿ ಉಡುಪಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಈಗಾಗಲೇ ಸರಕಾರ ಪ್ರಾಯೋಗಿಕವಾಗಿ ಈ ಯೋಜನೆ ಜಾರಿ ಮಾಡಿದ್ದು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇದರ ವಿಸ್ತರಣೆ ಮಾಡುವ ಗುರಿಯನ್ನು ಕಂದಾಯ ಇಲಾಖೆ ಹೊಂದಿದೆ. ವಂಚನೆಯಾಗುತ್ತಿತ್ತು:ಈ ಹಿಂದೆ ಒಬ್ಬರೇ ಬೇರೆ ಬೇರೆ ಯೋಜನೆಗಳಲ್ಲಿ ಎರಡ್ಮೂರು ಅರ್ಜಿಗಳನ್ನು ಸಲ್ಲಿಸಿ ಪಡೆಯುತ್ತಿದ್ದ ಪ್ರಕರಣಗಳಿದ್ದು ಹೊಸ ಯೋಜನೆಯಲ್ಲಿ ಆಧಾರ್ ಸಂಖ್ಯೆಗೆ ಬೆನಿಫಿಶಿಯರ್ ಐಡಿ ಸೇರಿಸಿ ಆ ವ್ಯಕ್ತಿ ಒಂದು ಯೋಜನೆಗೆ ಸೆಲೆಕ್ಟ್ ಅದ್ಮೇಲೆ ಅದೇ ವ್ಯಕ್ತಿ ಮತ್ತೊಂದು ಅರ್ಜಿ ಸಲ್ಲಿಸಿದ್ದಲ್ಲಿ ಈಗಾಗಲೇ ಈ ವ್ಯಕ್ತಿ ಸೌಲಭ್ಯ ಪಡೆಯುತ್ತಿದ್ದಾನೆ ಎಂದು ತೋರಿಸಿ ರಿಜೆಕ್ಟ್ ಮಾಡಲಾಗುವ ತಂತ್ರಾಂಶ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಫಲಾನುಭವಿಗಳೆಷ್ಟು?ಇಂದಿರಾಗಾಂಧಿ ವೃದ್ಧಾಪ್ಯವೇತನ 36262, ಸಂಧ್ಯಾ ಸುರಕ್ಷೆ ಯೋಜನೆ 48650,ವಿಧವಾ ವೇತನ 32469, ವಿಕಲ ಚೇತನರು 13388, ಮೈತ್ರಿ ಯೋಜನೆ 48, ಮನಸ್ವಿನಿ 1704, ಫಾರ್ಮರ್ ವಿಡೋ ಫೆನ್ಷನ್ 15, ಆಸೀಡ್ ದಾಳಿ 1 ಒಟ್ಟು 1,32,537 ಈ ಯೋಜನೆಯನ್ನು ಈಗಾಗಲೇ ರಾಜ್ಯದ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ದು ಯಶಸ್ಸು ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇದರ ವಿಸ್ತಣೆಯ ಗುರಿ ಹೊಂದಲಾಗಿದೆ. ಶೀಘ್ರ ಇದಕ್ಕೆ ಚಾಲನೆ ನೀಡಲಿದ್ದೇವೆ. ಯೋಜನೆಗಳ ದುರ್ಬಳಕೆ ತಡೆಯೋದೆ ಇದರ ಮುಖ್ಯ ಉದ್ದೇಶ. ಆರ್.ಅಶೋಕ್, ಕಂದಾಯ ಸಚಿವರು
from India & World News in Kannada | VK Polls https://ift.tt/37rv0lt