ಹೊಸದಿಲ್ಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ನಾಯಕತ್ವದ ತಂಡಕ್ಕೆ ಸದ್ಯ ಆರನೇ ಬೌಲಿಂಗ್ ಆಯ್ಕೆಯ ಸಮಸ್ಯೆ ಕಾಡುತ್ತಿದ್ದ ಎಂದ ಟೀಮ್ ಇಂಡಿಯಾ ಮಾಜಿ ಆರಂಭಿಕ ಗೌತಮ್ ಗಂಭೀರ್, ವೇಗದ ಬೌಲಿಂಗ್ ಆಲ್ರೌಂಡರ್ ಕೊರತೆಯ ಬಗ್ಗೆ ಬೆಳಕು ಚೆಲ್ಲಿದರು. ಶುಕ್ರವಾರ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 66 ರನ್ಗಳಿಂದ ಸೋಲು ಅನುಭವಿಸಿದ ಬಳಿಕ ಗಂಭೀರ್ ಈ ಅಂಶವನ್ನು ಬಹಿರಂಗಪಡಿಸಿದರು. ಆರೋನ್ ಫಿಂಚ್ ಪಡೆ 50 ಓವರ್ಗಳಿಗೆ 6 ವಿಕೆಟ್ಗಳ ನಷ್ಟಕ್ಕೆ 374 ರನ್ಗಳನ್ನು ದಾಖಲಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಭಾರತ ತಂಡ 308 ರನ್ಗಳಿಗೆ ಸೀಮಿತವಾಗಿತ್ತು. ಯುಜ್ವೇಂದ್ರ ಚಹಲ್ ಹಾಗೂ ನವದೀಪ್ ಸೈನಿ 80 ಕ್ಕಿಂತಲೂ ಹೆಚ್ಚಿನ ರನ್ಗಳನ್ನು ಬಿಟ್ಟುಕೊಟ್ಟರು. ಕೇವಲ ಐವರು ಬೌಲರ್ಗಳಿಂದ 50 ಓವರ್ಗಳನ್ನು ಮಾಡಿಸುವುದು ವಿರಾಟ್ ಕೊಹ್ಲಿ ಕಷ್ಟವಾಗುತ್ತದೆ. ಈ ಕಾರಣದಿಂದಲೇ ಎದುರಾಳಿ ತಂಡಕ್ಕೆ ಬೃಹತ್ ಮೊತ್ತ ನೀಡಬೇಕಾಯಿತು. ಈ ಬಗ್ಗೆ ಇಎಸ್ಪಿಎನ್ ಕ್ರಿಕ್ಇನ್ಫೋ ಜತೆ ಮಾತನಾಡಿದ ಗಂಭೀರ್, "2019ರ ವಿಶ್ವಕಪ್ನಿಂದ ಭಾರತಕ್ಕೆ ಈ ಸಮಸ್ಯೆ ಕಾಡುತ್ತಿದೆ. ಬೌಲಿಂಗ್ ಮಾಡಲು ಸಾಧ್ಯವಾಗದೇ ಇದಲ್ಲಿ, ಆರನೇ ಬೌಲಿಂಗ್ ಆಯ್ಕೆ ಯಾರು? ಒಂದು ವೇಳೆ ರೋಹಿತ್ ಶರ್ಮಾ ತಂಡಕ್ಕೆ ಬಂದರೆ, ಇದೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಒಂದೆರಡು ಓವರ್ಗಳನ್ನು ಬೌಲಿಂಗ್ ಮಾಡಲು ಅಗ್ರ ಆರು ಆಟಗಾರರಲ್ಲಿ ಯಾರಿಗೂ ನೀಡಲು ಸಾಧ್ಯವಿಲ್ಲ," ಎಂದು ಹೇಳಿದರು. "ಆಸ್ಟ್ರೇಲಿಯಾ ತಂಡವನ್ನು ನೀವು ನೋಡಬಹುದು, ಮೊಯ್ಸೆಸ್ ಹೆನ್ರಿಕ್ ಹಾಗೂ ಶೇನ್ ಅಬಾಟ್ ಅವರಂಥ ಬೌಲಿಂಗ್ ಆಲ್ರೌಂಡರ್ಗಳಿದ್ದಾರೆ. ಅದೇ ಭಾರತದ ಬಗ್ಗೆ ಮಾತನಾಡುವುದಾದರೆ, ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವುದಿಲ್ಲ ಎಂದಾದರೆ, ಆರನೇ ಬೌಲಿಂಗ್ ಆಯ್ಕೆ ಯಾರು? ಮತ್ತೊಬ್ಬ ಆಲ್ರೌಂಡರ್ ವಿಜಯ್ ಶಂಕರ್ ಅವರ ಬಗ್ಗೆ ನಾನು ಯೋಚನೆ ಮಾಡುತ್ತೇನೆ, ಅವರು ಬ್ಯಾಟಿಂಗ್ 5 ಅಥವಾ 6 ನೇ ಕ್ರಮಾಂಕದಲ್ಲಿ ಆಡಿದರೆ, ಅವರು ಎಂಟು ಓವರ್ಗಳು ಬೌಲಿಂಗ್ ಮಾಡಬಹುದೇ? ಈ ಬಗ್ಗೆ ನನ್ನಲ್ಲಿ ಅನುಮಾನಗಳಿವೆ," ಎಂದು ಹೇಳಿದರು. 375 ರನ್ಗಳ ಗುರಿ ಹಿಂಬಾಲಿಸಿದ ಭಾರತದ ಪರ ಹಾರ್ದಿಕ್ ಪಾಂಡ್ಯ ಸ್ಪೋಟಕ ಬ್ಯಾಟಿಂಗ್ ಮಾಡಿದ್ದರು. ಅವರು 90 ರನ್ಗಳನ್ನು ಸಿಡಿಸಿದ್ದರು. ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ಬ್ಯಾಟಿಂಗ್ ಕೊರತೆಯಿಂದ ಭಾರತ 66 ರನ್ಗಳಿಂದ ಸೋಲು ಅನುಭವಿಸಬೇಕಾಯಿತು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೇ ಇರಲು ಕಾರಣವನ್ನು ಬಹಿರಂಗಪಡಿಸಿದ್ದರು. "ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅತ್ಯಂತ ಮುಖ್ಯವಾದ ಪಂದ್ಯಗಳಲ್ಲಿ ಶೇ.100 ರಷ್ಟು ಬೌಲಿಂಗ್ ಮಾಡಲು ಗುರಿ ಇಟ್ಟುಕೊಂಡಿದ್ದೇನೆ. ಎರಡು ವಿಶ್ವಕಪ್ ಟೂರ್ನಿಯಗಳು ಬರುತ್ತಿವೆ ಹಾಗೂ ನಿರ್ಣಾಯಕ ಸರಣಿಗಳು ಮುಂದೆ ಆಡಬೇಕಾಗಿದೆ," ಎಂದು ಹೇಳಿದರು. " ಇದು ನನ್ನ ದೀರ್ಘಾವಧಿಯ ಯೋಜನೆಯಾಗಿದೆ. ತ್ವರಿತವಾಗಿ ಬೌಲಿಂಗ್ ಮಾಡಿ ಮತ್ತೇ ಗಾಯಕ್ಕೆ ತುತ್ತಾಗುವುದು ಬೇಡ. ಹಾಗಾಗಿ, ನಿಧಾನವಾಗಿ ಎಲ್ಲವೂ ನಡೆಯಲಿದೆ. ಯಾವಾಗ ಬೌಲಿಂಗ್ ಮಾಡುತ್ತೇನೆಂದು ಖಚಿತಪಡಿಸುವುದಿಲ್ಲ. ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆಮ ನೆಟ್ಸ್ನಲ್ಲಿ ಬೌಲಿಂಗ್ ಮಾಡುತ್ತಿದ್ದೇನೆ. ಆದರೆ, ನಾನು ಇನ್ನೂ ಪಂದ್ಯದಲ್ಲಿ ಬೌಲಿಂಗ್ ಮಾಡಲು ತಯಾರಿಯಾಗಿಲ್ಲ. ಅಂದರೆ, ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಕೌಶಲ ಹಾಗೂ ವಿಶ್ವಾದ ಮೇಲೆ ಇದೆಲ್ಲವೂ ನಿಂತಿದೆ," ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3q7ABFS