ನಂದಗುಡಿ: ಜಮೀನಿನಲ್ಲಿ ಕುರಿಗಳು ಮೇಯುತ್ತಿದ್ದ ಕ್ಷುಲ್ಲಕ ಕಾರಣಕ್ಕೆ ಸೋದರರಿಬ್ಬರ ನಡುವೆ ಜಗಳ ಆರಂಭವಾಗಿ ಕುಪಿತನಾದ ತಮ್ಮ ಅಣ್ಣನ ತಲೆಗೆ ಸುತ್ತಿಗೆಯಿಂದ ಹೊಡೆದು ಮಾರಣಾಂತಿಕ ನಡೆಸಿರುವ ಘಟನೆ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಂದಗುಡಿ ಹೋಬಳಿಯ ಶಿವನಾಪುರ ಗ್ರಾಪಂ. ವ್ಯಾಪ್ತಿಯ ಭೀಮಾಪುರದಲ್ಲಿ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಕಾರಣಕ್ಕೆ ಪಿಳ್ಳಣ್ಣ (40) ಎಂಬುವವರ ತಲೆಗೆ ತಮ್ಮನಾದ ಆರೋಪಿ ಅಮರನಾಥ್ (37) ಸುತ್ತಿಗೆಯಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಘಟನೆ ವಿವರ ಗ್ರಾಮದ ವಾಸಿ ಜಯಪ್ಪ ಮಕ್ಕಳಲ್ಲಿ ಆಸ್ತಿ ಪಾಲು ವಿಚಾರದಲ್ಲಿ ವೈಮನಸ್ಯ ಬೆಳೆದಿದ್ದು, ಜಮೀನಿನಲ್ಲಿ ಕುರಿಗಳನ್ನು ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಆರೋಪಿ ಅಮರನಾಥ್ ತನ್ನ ತಂದೆಯೊಂದಿಗೆ ಕ್ಯಾತೆ ತೆಗೆದಿದ್ದು, ಸೋದರರಿಬ್ಬರ ನಡುವೆ ಮಾತಿನ ಜಗಳ ವಿಕೋಪಕ್ಕೆ ಹೋಗಿ ಕುಪಿತನಾದ ತಮ್ಮ ಸುತ್ತಿಗೆಯಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಗಾಯಾಳು ಪಿಳ್ಳಣ್ಣ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದು, ಗ್ರಾಮಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುದ್ದಿ ತಿಳಿದ ನಂದಗುಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಅಮರನಾಥ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
from India & World News in Kannada | VK Polls https://ift.tt/3kWWGnx