ಗುವಹಾಟಿ: ಲಡಾಖ್ ಗಡಿಯಲ್ಲಿ ಚೀನಾದ ದುಸ್ಸಾಹಸವನ್ನು ಎದುರಿಸುತ್ತಿರುವ , ಪೂರ್ವದ ಗಡಿ ಅರುಣಾಚಲ ಪ್ರದೇಶದಲ್ಲಿ ಇದು ಮರುಕಳಿಸದಂತೆ ಎಚ್ಚರವಹಿಸಿದೆ. ಲಡಾಖ್‌ನಲ್ಲಿ ಸುದೀರ್ಘ ಗಡಿ ಘರ್ಷಣೆಯ ಅನಿವಾರ್ಯತೆ ಎದುರಾಗಿದ್ದು, ಇದೀಗ ಅರುಣಾಚಲ ಪ್ರದೇಶದಲ್ಲೂ ಚೀನಾ ಇದರ ಪುನರಾವರ್ತನೆಗೆ ಹೊಂಚು ಹಾಕಿ ಕುಳಿತಿರುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶದ ವಾಸ್ತವಿಕ ಗಡಿ ರೇಖೆ(ಎಲ್‌ಎಸಿ)ಯಲ್ಲಿ ಹೆಚ್ಚಿನ ನಿಗಾ ಇಡಲು ಭಾರತೀಯ ಸೇನೆ ನಿರ್ಧರಿಸಿದೆ. ಜೊತೆಗೆ ಪೂರ್ವದ ಗಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನೂ ನಿಯೋಜಿಸಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಕರೆಯುವ ಚೀನಾ, ಎಲ್‌ಎಸಿ ಬಳಿ ಭಾರೀ ಸಂಖ್ಯೆಯಲ್ಲಿ ಸೈನ್ಯವನ್ನು ಜಮಾವಣೆಗೊಳಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಕೂಡ ಈ ಗಡಿಯಲ್ಲಿ ಹೆಚ್ಚಿನ ತುಕಡಿಗಳನ್ನು ನಿಯೋಜಿಸಿದೆ. ಘರ್ಷಣೆಯಿಂದಾಗಿ ಸೇನೆಯ ಗಮನ ಆ ಕಡೆಯತ್ತಲೇ ಹೆಚ್ಚಿದೆ. ಇದನ್ನೇ ಬಳಸಿಕೊಂಡು ಪೂರ್ವದಲ್ಲಿ ಮತ್ತೊಂದು ಸಂಘರ್ಷದ ಪರಿಸ್ಥಿತಿಯನ್ನು ಸೃಷ್ಟಿಸುವುದು ಚೀನಾದ ಉದ್ದೇಶವಾಗಿರಲಿಕ್ಕೂ ಸಾಕು. ಈ ಹಿನ್ನೆಲೆಯಲ್ಲಿ ಲಡಾಖ್‌ನಲ್ಲಿ ಉದ್ಭವಿಸಿರುವ ಸ್ಥಿತಿ ಪೂರ್ವದ ಗಡಿಯಲ್ಲಿ ಉದ್ಭವಿಸಬಾರದು ಎಂದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಭಾರತೀಯ ಸೇನೆ, ಎಲ್‌ಎಸಿ ಬಳಿ ಹೆಚ್ಚಿನ ನಿಗಾ ಇರಿಸಿದೆ ಎಂದು ಸೇನೆಯ ಮೂಲಗಳು ಖಚಿತಪಡಿಸಿವೆ. ಒಟ್ಟಿನಲ್ಲಿ ಎಲ್‌ಎಸಿಯುದ್ದಕ್ಕೂ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಚೀನಾದ ಕುತಂತ್ರಗಳನ್ನು ವಿಫಲಗೊಳಿಸಲು ಭಾರತೀಯ ಸೇನೆ ಕೂಡ ಸಜ್ಜಾಗಿದೆ.
from India & World News in Kannada | VK Polls https://ift.tt/3hQrGnT