ಪ್ರಮೋದ ಹರಿಕಾಂತ ಬೆಳಗಾವಿಬೆಂಗಳೂರು: ಕೊರೊನಾವೂ ಸೇರಿದಂತೆ ನಾನಾ ಕಾರಣಗಳಿಗಾಗಿ ಸರಕಾರಿ ಶಾಲೆಗಳು ಮತ್ತೊಮ್ಮೆ ಬೇಡಿಕೆ ಪಡೆಯುತ್ತಿವೆ. ಈ ನಡುವೆ ಜನರಲ್ಲಿ ಹೆಚ್ಚುತ್ತಿರುವ ನಂಬಿಕೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಸರಕಾರಿ ಶಾಲೆಗಳು ಹಾಗೂ ಶಿಕ್ಷಣ ವ್ಯವಸ್ಥೆಗೆ ಪುನಶ್ಚೇತನ ನೀಡಬೇಕಾದ ಅಗತ್ಯವೂ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಈಗಾಗಲೇ ರಾಜ್ಯಾದ್ಯಂತ 50,000ಕ್ಕೂ ಅಧಿಕ ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಬಿಟ್ಟು ಸರಕಾರಿ ಶಾಲೆಗಳಲ್ಲಿ ದಾಖಲಾಗಿದ್ದಾರೆ. ರಾಜ್ಯದಲ್ಲಿ ಮುಚ್ಚಿದ್ದ 80ಕ್ಕೂ ಹೆಚ್ಚು ಶಾಲೆಗಳನ್ನು ಮರು ಆರಂಭಿಸಲು ಪೋಷಕರು ಅಧಿಕೃತ ಬೇಡಿಕೆ ಸಲ್ಲಿಸಿದ್ದಾರೆ. ಇದು ಕೊರೊನಾ ಕಾರಣದಿಂದಾಗಿ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಎಂದು ಹೇಳಲಾಗುತ್ತಿದೆಯಾದರೂ ಸರಕಾರಿ ಶಾಲೆಗಳಲ್ಲಿ ಸಿಗುತ್ತಿರುವ ಸವಲತ್ತು ಮತ್ತಿತರ ಕಾರಣಗಳೂ ಇದರ ಹಿಂದಿವೆ. ಒಂದು ಕಾಲದಲ್ಲಿ ಉತ್ತುಂಗದಲ್ಲಿದ್ದ ಸರಕಾರಿ ಶಾಲೆಗಳು ಬಳಿಕ ಖಾಸಗಿ ಶಾಲೆಗಳ ಆಕರ್ಷಣೆ ಮತ್ತು ಇಂಗ್ಲಿಷ್ ಮಾಧ್ಯಮದ ಅಬ್ಬರದಲ್ಲಿ ಬೇಡಿಕೆ ಕಳೆದುಕೊಳ್ಳುತ್ತಾ ಸಾಗಿದವು. ಕೆಲವು ವರ್ಷಗಳಲ್ಲಿ ಸಾವಿರಾರು ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚಿಹೋದವು. 400ರಷ್ಟು ವಿದ್ಯಾರ್ಥಿಗಳೊಂದಿಗೆ ವೈಭವ ಮೆರೆದಿದ್ದ ಶಾಲೆಗಳೂ ಕನಿಷ್ಠ 10 ಮಂದಿಯನ್ನು ಉಳಿಸಿಕೊಳ್ಳಲೂ ಆಗದ ಹತಾಶ ಸ್ಥಿತಿಗೆ ತಲುಪಿದ್ದವು. ಈ ನಡುವೆ, ರಾಜ್ಯದ 1000 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆರಂಭ ಮಾಡಿದ್ದು ಮತ್ತೆ ಜನ ಇವುಗಳತ್ತ ತಿರುಗಿ ನೋಡಲು ಕಾರಣವಾಗಿತ್ತು. ಇಂಥ ಶಾಲೆಗಳಲ್ಲಿಇದೀಗ ಸಂಚಲನ ಸೃಷ್ಟಿಯಾಗಿರುವುದರಿಂದ ಶಿಕ್ಷಣ ಇಲಾಖೆಯ ಜವಾಬ್ದಾರಿ ಹೆಚ್ಚಿದೆ. 12 ಸಾವಿರ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಾಜ್ಯದಲ್ಲಿರುವ ಸುಮಾರು 22 ಸಾವಿರ ಕಿರಿಯ ಪ್ರಾಥಮಿಕ ಶಾಲೆಗಳ ಪೈಕಿ 12 ಸಾವಿರದಷ್ಟು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕ ಇದ್ದಾರೆ. ಏಕೋಪಾಧ್ಯಾಯ ಶಾಲೆಗಳೆಲ್ಲವೂ ಗ್ರಾಮೀಣ ಭಾಗದಲ್ಲಿಯೇ ಇವೆ. ಅಂಥ ಶಾಲೆಗಳಲ್ಲಿ ಕನಿಷ್ಠ ಇಬ್ಬರು ಶಿಕ್ಷಕರು ಇರಬೇಕು. 1-5ನೇ ತರಗತಿವರೆಗಿನ ಎಲ್ಲ ಮಕ್ಕಳಿಗೆ ಒಂದೇ ಕೊಠಡಿಯೊಳಗೆ ಬೋಧಿಸುವ ರೂಢಿ ಬದಲಾಗಿ ಕನಿಷ್ಠ ಎರಡು ಕೊಠಡಿಗಳಾದರೂ ಇರಬೇಕು. ಶಿಕ್ಷಕರು ಶಿಕ್ಷಕರಾಗಿರಲಿಖಾಸಗಿ ಶಾಲೆಗಳಿಗೆ ಹೋಲಿಸಿದರೆ ಶಿಕ್ಷಕರಿಗೆ ಬೋಧನೆಗಿಂತ ಇತರೆ ಕೆಲಸಗಳೇ ಹೆಚ್ಚು. ಗುಣಮಟ್ಟದ ಶಿಕ್ಷಕರು, ಉತ್ತಮ ಶಿಕ್ಷಣ ಪದ್ಧತಿ ಇದ್ದರೂ ಜಾರಿ ಮಾಡಲು ಶಿಕ್ಷಕರಿಗೆ ಸಮಯವೇ ಸಿಗುತ್ತಿಲ್ಲ. ಹಾಗಾಗಿ ಬೋಧನೆಗೆ ಹೆಚ್ಚು ಅವಕಾಶ ಕಲ್ಪಿಸಬೇಕು. ಏಕೋಪಾಧ್ಯಾಯ ಶಾಲೆಗಳಲ್ಲಂತೂ ಒಂದು ದಿನ ಶಿಕ್ಷಕರು ಶಿಕ್ಷಣ ಇಲಾಖೆ ಕಚೇರಿಗೆ ಹೋದರೆ ಆ ದಿನ ಶಾಲೆಗೆ ರಜೆ ಎನ್ನುವ ಭಾವನೆ ಊರುಗಳಲ್ಲಿ ಮೂಡುತ್ತಿದೆ. ಸರಕಾರಿ ಶಾಲೆಗಳ ಸಮಸ್ಯೆಗಳು
- ಡಿಜಿಟಲೀಕರಣ ಶಿಕ್ಷಣದ ಅನಿವಾರ್ಯವಾಗಿರುವ ಕಾಲದಲ್ಲಿ ಕೆಲವು ಶಾಲೆಗಳಲ್ಲಿ ವಿದ್ಯುತ್ತೇ ಇಲ್ಲ.
- ವಿದ್ಯುತ್ ಸಂಪರ್ಕವಿದ್ದರೂ ಕೆಲವು ಶಾಲೆಗಳು ಬಿಲ್ ಪಾವತಿಸದೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಕಂಪ್ಯೂಟರ್, ಟಿವಿ ಬಳಕೆ ಸಾಧ್ಯವಾಗಿಲ್ಲ.
- ನೀರಿನ ಸಂಪರ್ಕಕ್ಕೂ ಪರದಾಡುವ ಮತ್ತು ಕೆಲವೆಡೆ ನೀರಿನ ಬಿಲ್ ಶಿಕ್ಷಕರೇ ಪಾವತಿಸುವ ಸ್ಥಿತಿ ಇದೆ.
- 2 ವರ್ಷಗಳಿಂದ ಹಣ ಬಾರದೆ ಸಣ್ಣ ಪುಟ್ಟ ದುರಸ್ತಿಯೂ ನಿಂತು ಹೋಗಿದೆ.
- ಅತ್ಯುತ್ತಮ ಕಟ್ಟಡ, ಆಕರ್ಷಕ ಶಾಲಾ ವಾತಾವರಣ.
- ಉತ್ತಮ ಶೌಚಾಲಯ ಮತ್ತು ಶುದ್ಧೀಕರಿಸಿದ ನೀರು
- ತರಗತಿಗೊಬ್ಬ ಶಿಕ್ಷಕ ಹಾಗೂ ವಿಷಯಕ್ಕೊಬ್ಬ ಶಿಕ್ಷಕ
- ಚಿತ್ರಕಲೆ, ಸಂಗೀತ, ದೈಹಿಕ ಶಿಕ್ಷಣ, ಕೃಷಿ ಪಾಠಕ್ಕೆ ಶಿಕ್ಷಕರು
- ಕಲಿಕಾ ಗುಣಮಟ್ಟ ಸುಧಾರಣೆಗೆ ನೆರವಾಗುವ ಕಲಿಕೋಪಕರಣಗಳು
- ಗಣಿತ ಲ್ಯಾಬ್, ಜ್ಞಾನ ಲ್ಯಾಬ್, ಗ್ರಂಥಾಲಯ ಇರಬೇಕು.
- ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಶಿಕ್ಷಣ ಸೌಲಭ್ಯ ಒದಗಿಸಬೇಕು.
from India & World News in Kannada | VK Polls https://ift.tt/36sTZFM