ಬೆಂಗಳೂರು: ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನು ಕೆಳಗಿಳಿಸಿದರೆ ಆ ಹುದ್ದೆಗೆ ಸಮುದಾಯದ ಮತ್ತೊಬ್ಬ ಪ್ರಬಲ ನಾಯಕರನ್ನೇ ಆಯ್ಕೆ ಮಾಡುವ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಬೇಕು ಎಂಬ ನಿರ್ಣಯವನ್ನು ಲಿಂಗಾಯತ ವೀರಶೈವ ಸಮನ್ವಯ ವೇದಿಕೆಯಲ್ಲಿ ಕೈಗೊಳ್ಳಲಾಗಿದೆ. ರಂಗಾಭರಣ ಕಲಾ ಕೇಂದ್ರದಲ್ಲಿ ಭಾನುವಾರ ನಿವೃತ್ತ ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮುದಾಯದ ಹಿರಿಯ ಮುಖಂಡರು ಚಿಂತನ-ಮಂಥನ ನಡೆಸಿದರು. ಸಮುದಾಯದಲ್ಲಿ ಮೂರನೇ ಬಣ ಸೃಷ್ಟಿಯಾದಲ್ಲಿ ಸಿಎಂ ಸ್ಥಾನ ಕೈ ತಪ್ಪಬಹುದು. ಹೀಗಾಗಿ, ಬಣ ರಾಜಕೀಯ ಮಾಡದೆ ಎಲ್ಲರೂ ಒಗ್ಗಟ್ಟು ಸಾಧಿಸಬೇಕು ಎಂಬ ಒಮ್ಮತ ನಿರ್ಣಯಕ್ಕೆ ಬರಲಾಯಿತು. 'ಈ ಹಿಂದೆ ಜೆಡಿಎಸ್ ಪಕ್ಷದ ವಚನ ಭ್ರಷ್ಟತೆಯಿಂದಾಗಿ ಯಡಿಯೂರಪ್ಪ ಅವರನ್ನು ಸಮುದಾಯದ ನಾಯಕರೆಂದು ಒಪ್ಪಿಕೊಳ್ಳಲಾಗಿತ್ತು. ಆದರೀಗ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸಾಧ್ಯತೆ ಇದೆ. ಆ ರೀತಿ ಆದಲ್ಲಿ ಯಡಿಯೂರಪ್ಪ ಅವರಿಂದ ತೆರವಾಗುವ ಸಿಎಂ ಹುದ್ದೆಯನ್ನು ಸಮುದಾಯಕ್ಕೆ ನೀಡಬೇಕು ಎಂಬ ಒತ್ತಡ ಹಾಕಲು ಯಾರೂ ಹಿಂಜರಿಯಬಾರದು ಎಂಬ ನಿರ್ಣಯ ಮಾಡಿದರು. ಇನ್ನು ಬಿಜೆಪಿಯಲ್ಲಿನ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ ಯತ್ನಾಳ್ ಅವರು ಸಿಎಂ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿಎಂ.ಬಿ.ಪಾಟೀಲ್ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ಜೆ.ಎಚ್.ಪಾಟೀಲ್, ಎಸ್.ಆರ್.ಬೊಮ್ಮಾಯಿ ಸಿಎಂ ಹುದ್ದೆ ಅಲಂಕರಿಸಿ ಮೌಲ್ಯಗಳನ್ನು ಎತ್ತಿ ಹಿಡಿದ್ದಾರೆ. ಇತ್ತೀಚೆಗೆ ಇದಕ್ಕೆ ಚ್ಯುತಿ ಬರುತ್ತಿದ್ದು, ಯಾವುದೇ ಪಕ್ಷದಲ್ಲಿ ಕಳಂಕಿತರು ನುಸುಳದಂತೆ ಎಚ್ಚರಿಕೆ ವಹಿಸುವ ಅಗತ್ಯವೂ ಇದೆ' ಎಂದು ಮುಖಂಡರು ಅಭಿಪ್ರಾಯಪಟ್ಟರು. ಅಲ್ಲದೇ ಸದ್ಯದಲ್ಲೇ ಬೆಂಗಳೂರಿನಲ್ಲಿ ಗುರು-ವಿರಕ್ತ ಸ್ವಾಮೀಜಿಗಳು ಹಾಗೂ ಪ್ರಮುಖರನ್ನೊಳಗೊಂಡ ಸಭೆಯನ್ನು ನಡೆಸಲು ನಿರ್ಧರಿಸಲಾಯಿತು. ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು, ಹಿರಿಯ ವಕೀಲ ಗಂಗಾಧರ ಗುರುಮಠ, ಹಾಲನೂರು ಲೇಪಾಕ್ಷಿ ಮತ್ತಿತರರಿದ್ದರು.
from India & World News in Kannada | VK Polls https://ift.tt/325W5IR