ರಾಜ್ಯದ ಎಲ್ಲ ಕೋರ್ಟ್‌ಗಳಲ್ಲಿ ಅಂಬೇಡ್ಕರ್‌ ಚಿತ್ರ ಕಡ್ಡಾಯ: ಹೈಕೋರ್ಟ್ ಆದೇಶ

ಬೆಂಗಳೂರು: ಹೈಕೋರ್ಟ್‌ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸಮಾರಂಭಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರ ಇಡುವುದನ್ನು ಕಡ್ಡಾಯಗೊಳಿಸಿ ಕರ್ನಾಟಕ ಹೈಕೋರ್ಟ್‌ ಆದೇಶ ಹೊರಡಿಸಿದೆ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದಲ್ಲಿ ನಡೆದ ಆಡಳಿತಾತ್ಮಕ ಪೂರ್ಣಪೀಠ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಮುಖ್ಯ ನ್ಯಾಯಮೂರ್ತಿಯವರ ನಿರ್ದೇಶನದ ಮೇರೆಗೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಟಿ.ಜಿ. ಶಿವಶಂಕರೇ ಗೌಡ ಸುತ್ತೋಲೆ ಹೊರಡಿಸಿದ್ದಾರೆ. ಅದರಂತೆ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಹಾಗೂ ಸಂವಿಧಾನ ದಿನದ ಆಚರಣೆ ವೇಳೆ ಹೈಕೋರ್ಟ್‌ ಪ್ರಧಾನಪೀಠ, ಧಾರವಾಡ, ಕಲಬುರಗಿ ಪೀಠಗಳು ಹಾಗೂ ಎಲ್ಲ ಜಿಲ್ಲಾ-ತಾಲೂಕು ನ್ಯಾಯಾಲಯಗಳಲ್ಲಿ ಆಯೋಜಿಸಲಾಗುವ ಅಧಿಕೃತ ಕಾರ್ಯಧಿಕ್ರಮಗಳಲ್ಲಿ ಅಂಬೇಡ್ಕರ್‌ ಭಾವಚಿತ್ರ ಇಡಲು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಗಣರಾಜ್ಯೋತ್ಸವ ದಿನದಂದು ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಕಾರ್ಯಕ್ರಮದಲ್ಲಿ ವೇದಿಕೆಯ ಮೇಲಿದ್ದ ಅಂಬೇಡ್ಕರ್‌ ಭಾವಚಿತ್ರ ತೆಗೆಸಿ ಅಪಮಾನ ಮಾಡಿದ್ದರು ಎಂದು ದೂರಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಮುಖ್ಯ ನ್ಯಾಯಮೂರ್ತಿ ಮತ್ತು ರಿಜಿಸ್ಟ್ರಾರ್‌ ಜನರಲ್‌ಗೆ ದೂರುಗಳ ಮಹಾಪೂರವೇ ಹರಿದು ಬಂದಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೈಕೋರ್ಟ್‌, ನ್ಯಾಯಾಂಗ ಕಾರ್ಯಕ್ರಮಗಳಲ್ಲಿಅಂಬೇಡ್ಕರ್‌ ಭಾವಚಿತ್ರವನ್ನು ಕಡ್ಡಾಯಗೊಳಿಸುವ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಸಂವಿಧಾನ ಶಿಲ್ಪಿ ಬಾಬಾಸಾಹೇಬ್‌ ಅಂಬೇಡ್ಕರ್‌ ಭಾವಚಿತ್ರವನ್ನು ಗಣರಾಜ್ಯೋತ್ಸವದಂದು ತೆಗೆಸುವ ಮೂಲಕ ಸಂವಿಧಾನಕ್ಕೆ ಅಪಚಾರವೆಸಗಿರುವ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆಗಳು ಮುಂದುವರಿದಿವೆ. ಸ್ವಾತಂತ್ರ್ಯ ದಿನ ಹಾಗೂ ಜನವರಿ 26 ರ ಗಣರಾಜ್ಯೋತ್ಸವ ಆಚರಣೆ ದಿನಗಳಂದು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್‌ ಭಾವಚಿತ್ರವನ್ನು ಎಲ್ಲಕೋರ್ಟ್‌ಗಳಲ್ಲಿ ಇರಿಸುವ ನಿರ್ಧಾರವನ್ನು ಹೈಕೋರ್ಟ್‌ ಕೈಗೊಂಡಿರುವುದು ಸ್ವಾಗರ್ತಾಹವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ನ್ಯಾಯಾಲಯದ ಈ ನಿರ್ಧಾರದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ನ್ಯಾಯ ಒದಗಿಸಿದಂತಾಗಿದೆ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ ಅವಸ್ಥಿ ನೇತೃತ್ವದಲ್ಲಿ ಬೆಂಗಳೂರಿನ ಪ್ರಧಾನ ಪೀಠದಲ್ಲಿ ಶುಕ್ರವಾರ ನಡೆದ ಆಡಳಿತಾತ್ಮಕ ಪೂರ್ಣ ಪೀಠ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡಿರುವುದು ತುಂಬಾ ಖುಷಿಯಾಗಿದೆ ಎಂದು ಅವರು ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.


from India & World News in Kannada | VK Polls https://ift.tt/uvHiFLb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...