ಮೈಸೂರು: ಚಾಮರಾಜೇಂದ್ರ ಮೃಗಾಲಯದ ನಿರ್ವಹಣೆ ದೃಷ್ಟಿಯಿಂದ ಟಿಕೆಟ್ ದರದಲ್ಲಿ ಪರಿಷ್ಕರಣೆ ಮಾಡಲಾಗಿದೆ. ಮೃಗಾಲಯ ವ್ಯಾಪ್ತಿಯಲ್ಲಿರುವ ಟಿಕೆಟ್ ದರವನ್ನು 5 ರಿಂದ 10 ರೂ. ಹೆಚ್ಚಿಸಲಾಗಿದೆ. ಜತೆಗೆ ಮೃಗಾಲಯ ಮತ್ತು ಕಾರಂಜಿ ಕೆರೆ ಕಾಂಬೋ ಆಫರ್ ಟಿಕೆಟ್‌ನ ದರದಲ್ಲಿಯೂ ಏರಿಕೆ ಮಾಡಲಾಗಿದ್ದು, ಇದೇ ಮಾರ್ಚ್ 1ರಿಂದ ಜಾರಿಗೆ ಬರಲಿದೆ. ಮೈಸೂರಿನ ಕೂರ್ಗಳ್ಳಿಯಲ್ಲಿರುವ ಮೃಗಾಲಯ ಪ್ರಾಧಿಕಾರದ ಆಡಳಿತ ಕಚೇರಿ ಆವರಣದಲ್ಲಿ ಗುರುವಾರ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹಾದೇವ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕಾರಂಜಿ ಕೆರೆ ಟಿಕೆಟ್ ದರವನ್ನು ವಯಸ್ಕರಿಗೆ 50 ರೂ. ಮಕ್ಕಳಿಗೆ 25 ರೂ.ಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರವೇಶದ ಕಾಂಬೋ ಟಿಕೆಟ್ ದರವನ್ನು ವಯಸ್ಕರಿಗೆ 130 ರೂ. ಮತ್ತು ಮಕ್ಕಳಿಗೆ 70 ರೂ. ಹೆಚ್ಚಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷರು ಮಾಹಿತಿ ನೀಡಿದರು. ಮೂರು ಪ್ರಾಣಿ ಮನೆ ನಿರ್ಮಾಣಕ್ಕೆ ಒಪ್ಪಿಗೆ: ಮೃಗಾಲಯದ ಆವರಣದಲ್ಲಿ ಆರ್‌ಬಿಐ ನೋಟು ಮುದ್ರಣಾಲಯ ವತಿಯಿಂದ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದಿಂದ ಗೊರಿಲ್ಲ ಫ್ಯಾಮಿಲಿ ಪ್ರಾಣಿ ಮನೆ, ಓರಾಂಗೂಟಾನ್ ಮನೆ ಮತ್ತು ಕ್ಲಾತ್ ಕರಡಿ ಮನೆ ನಿರ್ಮಾಣಕ್ಕೆ ತಾಂತ್ರಿಕ ಒಪ್ಪಿಗೆ ನೀಡಲಾಯಿತು. ಅಂಡರ್‌ಪಾಸ್ ಉದ್ಘಾಟನೆ: ಮೃಗಾಲಯದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಜಿಲ್ಲಾ ಸಚಿವರು, ಶಾಸಕರು, ಸಂಸದರನ್ನು ಆಹ್ವಾನಿಸಿ ಮುಂದಿನ ದಿನಗಳಲ್ಲಿ ಉದ್ಘಾಟಿಸಲು ನಿರ್ಧರಿಸಲಾಯಿತು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಗೋಗಿ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜಯ ಎಸ್. ಬಿಜೂರು, ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ವತ್ಸಲಾ ಕುಮಾರಿ, ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಮೇಯರ್ ಸುನಂದಾ ಪಾಲನೇತ್ರ, ಗೋಕುಲ್, ಜ್ಯೋತಿ ರೇಚಣ್ಣ, ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ಅಜಿತ್ ಎಂ. ಕುಲಕರ್ಣಿ ಇದ್ದರು.
from India & World News in Kannada | VK Polls https://ift.tt/so3qU1E