ಬೆಂಗಳೂರು: ರಾಷ್ಟ್ರಧ್ವಜದ ಬದಲು ಹಾರಿಸುವ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಕೆಎಸ್ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಶಾಸಕರು ಅಹೋರಾತ್ರಿ ಧರಣಿ ಮೂಲಕ ಸರಕಾರದ ಮೇಲೆ ಒತ್ತಡ ಹೇರುವ ಪ್ರಯತ್ನದಲ್ಲಿ ಯಶಸ್ವಿಯಾದಂತೆ ಕಂಡರೂ ಆಂತರಿಕವಾಗಿ ಧರಣಿಗೆ ಸಣ್ಣ ಪ್ರಮಾಣದ 'ಅಪಸ್ವರ' ಕೇಳಿಬರಲಾರಂಭಿಸಿದಂತಿದೆ. ರಾಜ್ಯಪಾಲರ ಜಂಟಿ ಅಧಿವೇಶನ ಭಾಷಣದೊಂದಿಗೆ ಅಧಿವೇಶನ ಆರಂಭವಾಗಿತ್ತು. ಬುಧವಾರದಿಂದಲೇ ಈಶ್ವರಪ್ಪ ತಲೆದಂಡಕ್ಕೆ ಒತ್ತಾಯಿಸಿ ಕಾಂಗ್ರೆಸ್ ಶಾಸಕರು ಉಭಯ ಸದನಗಳಲ್ಲಿ ಧರಣಿ ಆರಂಭಿಸಿದರು. ಗುರುವಾರ ಬೆಳಗ್ಗೆ 11 ಗಂಟೆವರೆಗೆ ಗಡುವು ನೀಡಿದ್ದ ಕಾಂಗ್ರೆಸ್ ನಾಯಕರು ಬಳಿಕ ಅಹೋರಾತ್ರಿ ಧರಣಿಗೆ ಮುಂದಾದರು. ಧರಣಿಯಲ್ಲಿ ಇದ್ದವರಿಗೆ ಉತ್ಸಾಹ ಕ್ರಮೇಣ ಕಡಿಮೆಯಾದಂತಿದೆ. ಇದಕ್ಕೆ ಪುಷ್ಠಿ ನೀಡುವಂತೆ ವಿಧಾನಸಭೆ ಗುರುವಾರ, ಶುಕ್ರವಾರ ರಾತ್ರಿ ಕ್ರಮವಾಗಿ 30, 20 ಹಾಗೂ ಪರಿಷತ್ನಲ್ಲಿ ಗುರುವಾರ, ಶುಕ್ರವಾರ ಕ್ರಮವಾಗಿ 17, 10 ಶಾಸಕರಷ್ಟೇ ಇದ್ದರು. ಆರೋಗ್ಯ ಸಮಸ್ಯೆಯಿರುವವರು, ಕೋವಿಡ್ ಕಾಣಿಸಿಕೊಂಡು ಚೇತರಿಸಿಕೊಂಡವರು ಧರಣಿಯಲ್ಲಿಸಕ್ರಿಯವಾಗಿ ಪಾಲ್ಗೊಳ್ಳಲು ಪರದಾಡುವಂತಾಗಿದೆ ಎನ್ನಲಾಗಿದೆ. ವಾರಾಂತ್ಯ ಧರಣಿಗೆ ಬೇಸರ ಅಧಿವೇಶನ ನಡೆಯುವಾಗ ವಾರಾಂತ್ಯದ ಎರಡು ದಿನ ಕ್ಷೇತ್ರದ ಜನರೊಂದಿಗೆ ಒಡನಾಡುವುದು ವಾಡಿಕೆ. ಆದರೆ ಅಹೋರಾತ್ರಿ ಧರಣಿಯಿಂದಾಗಿ ಕ್ಷೇತ್ರ ಭೇಟಿ ಕೈತಪ್ಪಿರುವ ಬಗ್ಗೆ ಹಲವು ಶಾಸಕರಲ್ಲಿ ಬೇಸರವಿದೆ. ತುರ್ತು ಕಾರ್ಯವಿದ್ದರಷ್ಟೇ ಕ್ಷೇತ್ರಗಳತ್ತ ತೆರಳಲು ಹಿರಿಯ ನಾಯಕರು ಅವಕಾಶ ನೀಡುತ್ತಿದ್ದು, ಅನಿವಾರ್ಯವಾಗಿ ಧರಣಿಯಲ್ಲಿ ಪಾಲ್ಗೊಳ್ಳುವಂತಾಗಿರುವ ಬಗ್ಗೆ ಅಪಸ್ವರ ಕೇಳಿಬಂದಿದೆ. ಸೋಮವಾರದ ಬಳಿಕವೂ ಧರಣಿ ಮುಂದುವರಿದರೆ ಎಂಬ ಆತಂಕವೂ ಹಲವರನ್ನು ಕಾಡುತ್ತಿದೆ. ಇತ್ತ ಕ್ಷೇತ್ರಕ್ಕೂ ಭೇಟಿ ನೀಡಲಾಗದಿದ್ದರೆ ತಪ್ಪು ಸಂದೇಶ ರವಾನೆಯಾಗುವ ಭೀತಿಯೂ ಹಲವರಲ್ಲಿದೆ. ಅಧಿವೇಶನ ಮುಕ್ತಾಯವಾಗುತ್ತಿದ್ದಂತೆ ಮೇಕೆದಾಟು ಪಾದಯಾತ್ರೆ ಪುನಾರಂಭವಾಗಲಿದೆ. ಬಳಿಕ ಬಜೆಟ್ ಅಧಿವೇಶನ ಶುರುವಾದರೆ ಮತ್ತೆ ಕ್ಷೇತ್ರಗಳತ್ತ ಮುಖ ಮಾಡುವುದು ಸವಾಲಾಗಲಿದೆ ಎಂಬುದು ಶಾಸಕರ ಅಳಲು. ಒಟ್ಟಾರೆ ಈಶ್ವರಪ್ಪ ರಾಜೀನಾಮೆ ನೀಡಬೇಕೆಂಬುದನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಕಾಂಗ್ರೆಸ್ಗೆ ಇದೀಗ ಶಾಸಕರನ್ನು ಧರಣಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕಾಯ್ದುಕೊಳ್ಳುವುದು ಸವಾಲಾಗಿದೆ.
from India & World News in Kannada | VK Polls https://ift.tt/1ogAJp6