ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಒಂದು ತಿಂಗಳ ಒಳಗಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು 371ಜೆ ಕಲಂ ಅನುಷ್ಠಾನ ಕುರಿತ ಸಂಪುಟ ಉಪ ಸಮಿತಿ ಅಧ್ಯಕ್ಷ, ಸಚಿವ ಶ್ರೀರಾಮುಲು ತಿಳಿಸಿದರು. ಸಮಿತಿಯ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಲಿ ಇರುವ ಹುದ್ದೆಗಳು ಮತ್ತು ಬಡ್ತಿ ಆಗಬೇಕಿರುವ ಹುದ್ದೆಗಳ ಬಗ್ಗೆ ಮಾಹಿತಿ ಇದೆ. ನೇಮಕಾತಿ ಬಗ್ಗೆ ಯೋಜನಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವರದಿ ನೀಡಲಿದ್ದು, ಅದಾದ ಬಳಿಕ ತಿಂಗಳಲ್ಲೇ ಖಾಲಿ ಹುದ್ದೆಗಳನ್ನು ಸ್ಥಳೀಯ ಮೀಸಲಾತಿ ನೀಡಿ ಭರ್ತಿ ಮಾಡಲಾಗುವುದು ಎಂದರು. ಆಡಿಟ್‌ಗೆ ಸೂಚನೆ ಕ-ಕ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಇದುವರೆಗೆ 2 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ನಿರೀಕ್ಷಿತ ಪ್ರಗತಿ ಕಂಡು ಬಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಈ ಭಾಗಕ್ಕೆ ಭಾರಿ ಪ್ರಮಾಣದ ಅನುದಾನ ನೀಡಲಾಗುತ್ತಿದೆ. ಬಂದಿರುವ ಅನುದಾನ, ಖರ್ಚಾಗಿರುವ ಮೊತ್ತ, ಅದರಿಂದ ಆಗಿರುವ ಬದಲಾವಣೆ ಬಗ್ಗೆ ಆಡಿಟ್ ವರದಿಯೂ ಮಾಡುವಂತೆ ಸೂಚಿಸಲಾಗಿದೆ ಎಂದರು. ಕೇಂದ್ರದ ಅನುದಾನ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರಕಾರ ಬದ್ಧವಾಗಿದ್ದು, ಕೆಕೆಆರ್‌ಡಿಬಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್‌ನಲ್ಲಿ ಘೋಷಿಸಿದಂತೆ ಪೂರ್ಣ ಪ್ರಮಾಣದ ಅನುದಾನದ ಅಂದರೆ 1,500 ಕೋಟಿ ರೂ.ನೀಡಲಾಗಿದೆ. ಸಿಎಂ ಸಹ ಕೇಂದ್ರ ಸರಕಾರದಿಂದ ಹಿಂದುಳಿದ ಭಾಗದ ಅಭಿವೃದ್ಧಿಗೆ 5,500 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಹಣಕಾಸು ಸಚಿವರಿಗೆ ಮನವಿ ಮಾಡಿದ್ದಾರೆ. ಕೇಂದ್ರ ಸಕಾರಾತ್ಮಕ ಸ್ಪಂದನೆ ನೀಡಿದೆ ಎಂದರು. ಈಗ ಬೆಂಗಳೂರಲ್ಲಿಇರುವ 371ಜೆ ವಿಶೇಷ ಕೋಶವನ್ನು ಕಲಬುರಗಿಗೆ ಸ್ಥಳಾಂತರಿಸಲು ತೀರ್ಮಾನ ಮಾಡಲಾಗಿದೆ. ಶೀಘ್ರವೇ ಸ್ಥಳಾಂತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಮಹಿಳಾ ಸಬಲೀಕರಣಕ್ಕೆ ಒತ್ತು. ಮಕ್ಕಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗುವುದು. ಈ ಭಾಗದಲ್ಲಿಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪೂರ್ಣ ಪ್ರಮಾಣದ ಮಂಡಳಿ ರಚಿಸಿ ಸಿಎಂ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದರು. ಕಚೇರಿಗೆ ಸಿಂಗಾರ; ಕಿಕ್ಕಿರಿದ ಯುವಕರು ಸಂಪುಟ ಉಪ ಸಮಿತಿಯಲ್ಲಿರುವ ಸಚಿವರು ಆಗಮಿಸಿದ ಹಿನ್ನಲೆಯಲ್ಲಿಇಲ್ಲಿನ ಕೆಕೆಆರ್‌ಡಿಬಿ ಕಚೇರಿಗೆ ಸುಣ್ಣ ಬಣ್ಣ ಬಳಿದು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪಿಎಸ್‌ಐ ನೇಮಕಾತಿ ವಿವಾದ ಬಗೆಹರಿಸುವಂತೆ ಯುವಕರ ದಂಡು ಬಂದಿತ್ತು.ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ಎಂಎಲ್ಸಿ ಶಶೀಲ್ ನಮೋಶಿ, ಎಸಿಎಸ್ ಶಾಲಿನಿ ರಜನೀಶ್ ಇದ್ದರು.
from India & World News in Kannada | VK Polls https://ift.tt/TBOCfsh