: ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪಾಠ- ಪ್ರವಚನಕ್ಕೆ ತೊಂದರೆ ಆಗಬಾರದೆಂಬ ದೂರದೃಷ್ಟಿಯಿಂದ ಜಿಲ್ಲಾಧಿಕಾರಿ ಶಾಲಾ-ಕಾಲೇಜ್ ಸುತ್ತಲಿನ 200 ಮೀ. ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ, ಹಿಜಾಬ್ಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿನಿಯರು ಗುರುವಾರ ಪ್ರತಿಭಟನೆ ನಡೆಸಿದರು. ನಗರದ ಸರಕಾರಿ ಕಾಲೇಜ್ ಬಳಿ ವಿದ್ಯಾರ್ಥಿನಿಯರು ಮತ್ತು ಪೋಷಕರು ಬುಧವಾರ ಪ್ರತಿಭಟನೆ ನಡೆಸಿದ್ದಲ್ಲದೇ, ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಹಿಜಾಬ್ಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಇದನ್ನು ಬುಧವಾರ ಸಂಜೆಯೇ ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು, ಶಾಲಾ-ಕಾಲೇಜ್ಗಳ ಸುತ್ತಲಿನ 200 ಮೀ. ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಆದರೆ ಗುರುವಾರ ಬೆಳಗ್ಗೆ ನಗರದ ಸರಕಾರಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ತರಗತಿಗೆ ತೆರಳಲು ಮುಂದಾದರು. ವಿದ್ಯಾರ್ಥಿನಿಯರ ಈ ನಡೆಗೆ ಕಾಲೇಜ್ ಪ್ರಾಚಾರ್ಯರು, ಹೈಕೋರ್ಟ್ ಮತ್ತು ರಾಜ್ಯ ಸರಕಾರದ ಆದೇಶದ ಕುರಿತು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ತರಗತಿ ಬಹಿಷ್ಕಾರ:ಹಿಜಾಬ್ ತೆಗೆದು ತರಗತಿಗೆ ತೆರಳುವಂತೆ ತಾಕೀತು ಮಾಡಿದರು. ಆದರೆ ಪಟ್ಟು ಬಿಡದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ತರಗತಿಗೆ ತೆರಳುತ್ತೇವೆ. ಇಲ್ಲದಿದ್ದರೆ ನಮಗೆ ಕ್ಲಾಸ್ ಬೇಡ ಎಂದು 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರಾಯೋಗಿಕ ಪರೀಕ್ಷೆ ಬಹಿಷ್ಕರಿಸಿ ಮನೆಗೆ ಮರಳಿದರು. ಕಾಲೇಜಿನ ಒಳಗಡೆ ಪ್ರತ್ಯೇಕ ಕೊಠಡಿ ಮಾಡಿದ್ದೇವೆ. ಅಲ್ಲಿ ಹಿಜಾಬ್ ತೆಗೆದು ತರಗತಿಗೆ ತೆರಳಿ ಎಂದು ಕಾಲೇಜ್ ಪ್ರಾಚಾರ್ಯರು ಹೇಳುತ್ತಿದ್ದಾರೆ. ಆದರೆ ಅದಕ್ಕೆ ನಮ್ಮ ಒಪ್ಪಿಗೆಯಿಲ್ಲ. ಹಾಗಾಗಿ ನಾವು ತರಗತಿಗಳಿಗೆ ಹೋಗುವ ಬದಲಿಗೆ ಮನೆಗೆ ಮರಳುತ್ತೇವೆ ಎಂದು ವಿದ್ಯಾರ್ಥಿನಿಯರು ವಿಜಯ ಕರ್ನಾಟಕಕ್ಕೆ ತಿಳಿಸಿದರು. ಡಿಸಿಗೆ ಮನವಿ : ಹಿಜಾಬ್ ಧರಿಸಿಯೇ ತರಗತಿಗೆ ತೆರಳಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ನಾನಾ ಕಾಲೇಜ್ ವಿದ್ಯಾರ್ಥಿನಿಯರು ಹಾಗೂ ಪೋಷಕರು ಹಾಗೂ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮಾರುಕಟ್ಟೆಗೂ ಬಿಸಿ:ಏತನ್ಮಧ್ಯೆ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಬಿಸಿ ನಗರದ ಹೂವಿನ ಮಾರುಕಟ್ಟೆಗೂ ತಟ್ಟಿದೆ. ಎಲ್ಲ ಕಾಲೇಜುಗಳ ಸುತ್ತಲಿನ 200 ಮೀ. ವ್ಯಾಪ್ತಿಯಲ್ಲಿ ಕಲಂ 144 ರನ್ವಯ ನಿಷೇದಾಜ್ಞೆ ಜಾರಿ ಇರುವುದರಿಂದ ನಗರದ ಸರಕಾರಿ ಕಾಲೇಜ್ ಬಳಿ ಇರುವ ಹೂವಿನ ಮಾರುಕಟ್ಟೆ ಬಂದ್ ಆಗಿದ್ದು, ಹೂವಿನ ವ್ಯಾಪಾರಿಗಳನ್ನು ಸಂಕಷ್ಟಕ್ಕೀಡು ಮಾಡಿತು. ಪ್ರತಿದಿನ ಬೆಳಗ್ಗೆ ಕನಿಷ್ಠ 2000 ವರೆಗೆ ವ್ಯಾಪಾರ ಮಾಡುತ್ತಿದ್ದ ತಮಗೆ ಈಗ ನಷ್ಟವುಂಟಾಗಿದೆ ಎಂದು ಹೂವಿನ ವ್ಯಾಪಾರಿ ತಿಳಿಸಿದರು.
from India & World News in Kannada | VK Polls https://ift.tt/sfvNZCR