ಲಾಹೋರ್: ಪ್ರಧಾನಿ ಅವರ ಮಲಮಗನನ್ನು ಬಂಧಿಸಿದ ಘಟನೆ ಲಾಹೋರ್ನಲ್ಲಿ ನಡೆದಿದೆ. ಕಾನೂನು ಬಾಹಿರವಾಗಿ ಹೊಂದಿದ್ದ ಆರೋಪದಲ್ಲಿ ಇಮ್ರಾನ್ ಖಾನ್ ಮಗ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು. ಆದರೆ 'ಉನ್ನತ ಅಧಿಕಾರಿಗಳ' ಆದೇಶದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಇಮ್ರಾನ್ ಖಾನ್ ಅವರ ಪತ್ನಿ ಅವರ ಮೊದಲ ಪತಿಯ ಮಗ ಮೂಸಾ ಮನೇಕ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಲಾಹೋರ್ನ ಗಡ್ಡಾಫಿ ಕ್ರೀಡಾಂಗಣದ ಸಮೀಪ ಸೋಮವಾರ ಬಂಧಿಸಲಾಗಿತ್ತು. ಅವರು ಪ್ರಯಾಣಿಸುತ್ತಿದ್ದ ಕಾರ್ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ ಆಲ್ಕೋಹಾಲ್ ಪತ್ತೆ ಆಗಿತ್ತು. "ದೇಶದ ಪ್ರಥಮ ಮಹಿಳೆಯ (ಮುಶ್ರಾ ಬೀಬಿ) ಮಗ ಸೇರಿದಂತೆ ಮೂವರು ಯುವಕರನ್ನು ಮೇಲಿನಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಅದೇ ದಿನ ಬಿಡುಗಡೆ ಮಾಡಲಾಗಿದೆ. ಶಂಕಿತರ ಕುಟುಂಬಗಳಿಂದ ವೈಯಕ್ತಿಕ ಖಾತರಿ ಪಡೆಯುವಂತಹ ಕೆಲವು ಕಾನೂನಾತ್ಮಕ ಔಪಚಾರಿಕ ಕ್ರಮಗಳನ್ನು ನಡೆಸಲಾಗಿದೆ" ಎಂದು ಪೊಲೀಸರು ಹೇಳಿದ್ದಾರೆ. ಅಕ್ರಮವಾಗಿ ಮದ್ಯ ಹೊಂದಿರುವ ಪ್ರಕರಣದಲ್ಲಿ ಮೂಸಾ ಮನೇಕನನ್ನು ವಶಕ್ಕೆ ಪಡೆದಾಗ, ತಾನು ಪಾಕಿಸ್ತಾನದ ಪ್ರಥಮ ಮಹಿಳೆಯ ಮಗ, ಇದರ ಪರಿಣಾಮವನ್ನು ಎದುರಿಸಬೇಕಾಗಲಿದೆ ಎಂದು ಭದ್ರತಾ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ. "ಅವರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಹಿರಿಯ ಅಧಿಕಾರಿಗಳಿಂದ ಪಂಜಾಬ್ ಪೊಲೀಸ್ ಮುಖ್ಯಸ್ಥರಿಗೆ ನಿರಂತರ ಫೋನ್ ಕರೆಗಳು ಬರಲಾರಂಭಿಸಿದವು. ಆದರೆ, ಪೊಲೀಸರು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಿಲ್ಲ. ಕೆಲವು ಗಂಟೆಗಳ ವಶದ ಬಳಿಕ ಅವರನ್ನು ಬಿಡುಗಡೆ ಮಾಡಿದರು" ಎಂದು ಪೊಲೀಸರು ತಿಳಿಸಿದ್ದಾರೆ. ಮುಸ್ಲಿಂ ಬಾಹುಳ್ಯದ ಪಾಕಿಸ್ತಾನದಲ್ಲಿ ಮದ್ಯ ಮಾರಾಟ ಮತ್ತು ಸೇವನೆ ಕಾನೂನುಬಾಹಿರವಾಗಿದೆ. ಇಮ್ರಾನ್ ಖಾನ್ ಮತ್ತು ಅವರ ಪತ್ನಿ ನಡುವೆ ಮನಸ್ತಾಪ ಉಂಟಾಗಿದೆ ಎಂದು ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡಿದ್ದವು. ಬನಿ ಗಲಾ ನಿವಾಸದಲ್ಲಿ ಇಮ್ರಾನ್ ಖಾನ್ ಅವರೊಂದಿಗೇ ಬೀಬಿ ವಾಸಿಸುತ್ತಿದ್ದಾರೆ. ಅವರ ನಡುವೆ ಯಾವುದೇ ಬಿರುಕು ಉಂಟಾಗಿಲ್ಲ ಎಂದು ಬೀಬಿ ಅವರ ಆಪ್ತ ಸ್ನೇಹಿತೆ ಫರಾಹ್ ಖಾನ್ ಟ್ವಿಟ್ಟರ್ನಲ್ಲಿ ಹೇಳಿದ್ದರು. ಇಮ್ರಾನ್ ಖಾನ್, ಅವರ ಪತ್ನಿ ಬೀಬಿ ಮತ್ತು ಸೇನೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ತಿಂಗಳ ಆರಂಭದಲ್ಲಿ ರಾಷ್ಟ್ರವ್ಯಾಪಿ ಕಾರ್ಯಾಚರಣೆ ನಡೆಸಿದ್ದ ಪಾಕಿಸ್ತಾನ್ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ, ಐವರನ್ನು ಬಂಧಿಸಿತ್ತು.
from India & World News in Kannada | VK Polls https://ift.tt/kqYvMQK